ಕರ್ನಾಟಕ

karnataka

ETV Bharat / state

ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಯ ಟೆಂಡರ್‌ಗೆ ಹೈಕೋರ್ಟ್ ಊರ್ಜಿತ - High Court - HIGH COURT

ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸುವಂತೆ ಲಾರ್ಸೆನ್ ಅಂಡ್ ಟುಬ್ರೋ (ಎಲ್ ಅಂಡ್ ಟಿ) ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Etv Bharat
Etv Bharat

By ETV Bharat Karnataka Team

Published : Apr 25, 2024, 11:04 PM IST

ಬೆಂಗಳೂರು: ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಲು ಮುಂದಾಗಿರುವ ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಸಂಬಂಧಿಸಿರುವ ಟೆಂಡರ್ ಪ್ರಕ್ರಿಯೆಯನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ.

ಈ ಯೋಜನೆಗೆ ಕರೆಯಲಾಗಿದ್ದ ಟೆಂಡರ್​ಅನ್ನು ಪ್ರಶ್ನಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕ ಸದಸ್ಯ ನ್ಯಾಯ ಪೀಠ ಹೊರಡಿಸಿದ್ದ ಆದೇಶ ರದ್ದು ಪಡಿಸಬೇಕು ಮತ್ತು ಟೆಂಡರ್ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸುವಂತೆ ಲಾರ್ಸೆನ್ ಅಂಡ್ ಟುಬ್ರೋ (ಎಲ್ ಅಂಡ್ ಟಿ) ಕಂಪನಿಯು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ಈ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.

ಈ ಕುರಿತ ವಿಸ್ತೃತ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಜತೆಗೆ, ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಎಲ್ ಅಂಡ್ ಟಿ ಕಂಪನಿ ಪರ ವಕೀಲರು ಮನವಿ ಮಾಡಿದರು. ಆದರೆ, ಈ ಮನವಿಯನ್ನೂ ವಿಭಾಗೀಯ ಪೀಠ ತಿರಸ್ಕರಿಸಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಟಿಸಿಎಲ್) ಎಂಟು ಸಾವಿರ ಕೋಟಿ ವೆಚ್ಚದಲ್ಲಿ ಹೈಡ್ರೋ ಪವರ್ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಮುಂದಾಗಿತ್ತು. ನಿಯಮಗಳಲ್ಲಿ ಬದಲಾವಣೆ ಮಾಡಿ ೩೦ ದಿನಗಳ ಅವಧಿಯನ್ನು ೨೧ ದಿನಗಳಿಗೆ ಇಳಿಸಲಾಗಿತ್ತು.

ಇದರಿಂದ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ಎಲ್ ಅಂಡ್ ಟಿ ಕಂಪನಿ, ಪಾರದರ್ಶಕ ಕಾಯ್ದೆಯ ಪ್ರಕಾರ ಟೆಂಡರ್​ಗೆ 30 ದಿನಗಳ ಕಾಲಾವಕಾಶ ನೀಡಬೇಕು. 5 ವರ್ಷ ಯೋಜನಾ ಅವಧಿಯ ಸುಮಾರು ಎಂಟು ಸಾವಿರ ಕೋಟಿ ಮೊತ್ತದ ಬೃಹತ್ ಯೋಜನೆಗೆ ಕೇವಲ 21 ದಿನಗಳ ಟೆಂಡರ್ ಅಖೈರುಗೊಳಿಸಲಾಗುತ್ತಿದೆ. ಕೆಲ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ನೀಡಲಾಗುತ್ತಿದೆ. ಆದ್ದರಿಂದ ಟೆಂಡರ್ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿತ್ತು.

ಈ ವಾದವನ್ನು ತಿರಸ್ಕರಿಸಿದ್ದ ಏಕಸದಸ್ಯ ನ್ಯಾಯ ಪೀಠ, ಅರ್ಜಿದಾರ ಕಂಪನಿಯು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಅಲ್ಲದೇ, ಟೆಂಡರ್ ಕರೆಯುವ ಪ್ರಾಧಿಕಾರಕ್ಕೆ ತನ್ನ ಅಗತ್ಯಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸಿಕೊಳ್ಳುವ ಅಧಿಕಾರ ಇರುವುದಾಗಿ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಹಾಗಾಗಿ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕಂಪನಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಪ್ರಸ್ತುತ ಟೆಂಡರ್ ಅನ್ನು ಕಡಿಮೆ ದರ ನಮೂದಿಸಿದ್ದ ಮೆರ್ಸಸ್ ಮೇಘ ಎಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಪಡೆದುಕೊಂಡಿದೆ.

ಇದನ್ನೂ ಓದಿ:ಒತ್ತುವರಿ ಆರೋಪ: ಲೋಕಾಯುಕ್ತ ಕುಂದುಕೊರತೆ ವಿಭಾಗಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ

ABOUT THE AUTHOR

...view details