ಬೆಳಗಾವಿ: ಇದೇ ಮೊದಲ ಬಾರಿಗೆ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಹಿರಿಜೀವಗಳು ವಿಮಾನದಲ್ಲಿ ಮುಂಬೈಗೆ ಪ್ರವಾಸ ಕೈಗೊಂಡಿದ್ದಾರೆ. ವೃದ್ಧರ ತಂಡ ಇಂದು ಮುಂಬೈ ತಲುಪಿದ್ದು, ಫೆಬ್ರವರಿ 26ಕ್ಕೆ ವಾಪಸ್ ಆಗಲಿದ್ದಾರೆ.
ಮುಂಜಾನೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಶಾಂತಾಯಿ ವೃದ್ಧಾಶ್ರಮದ 42 ಜನರ ತಂಡ ಆಗಮಿಸಿತು. ಈ ವೇಳೆ ಅನಾಥ ಹಿರಿಜೀವಗಳ ಖುಷಿಗೆ ಪಾರವೇ ಇರಲಿಲ್ಲ. ಯಾವಾಗ ವಿಮಾನ ಏರುವೆವು? ಯಾವಾಗ ಬಾನಂಗಳದಲ್ಲಿ ಹಾರುವೆವು? ಎಂದು ತುದಿಗಾಲಲ್ಲಿ ನಿಂತಿದ್ದರು. ಇಳಿ ವಯಸ್ಸಿನಲ್ಲಿ ಬಲು ಉತ್ಸಾಹದಿಂದ ಸ್ಟಾರ್ ಏರ್ವೇಸ್ ಏರಿದ ವೃದ್ಧಾಶ್ರಮದ ಸದಸ್ಯರು ಆಕಾಶಕ್ಕೆ ಎರಡೇ ಗೇಣು ಎನ್ನುವಂತೆ ಸಂಭ್ರಮಿಸಿದರು.
ಒಂದೇ ರೀತಿಯ ಹೊಸ ಸೀರೆ ಉಟ್ಟಿದ್ದ ಅಜ್ಜಿಯಂದಿರು, ಹೊಸ ಶರ್ಟ್ ಪ್ಯಾಂಟ್ ಧರಿಸಿದ್ದ ಅಜ್ಜಂದಿರ ಮೊಗ ನಗುವಿನಿಂದ ಕಂಗೊಳಿಸುತ್ತಿತ್ತು. ಮುಂಬೈಗೆ ಇವರನ್ನು ರಾಜ್ಯಸಭಾ ಮಾಜಿ ಸದಸ್ಯ, ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಬೀಳ್ಕೊಟ್ಟರು.
ಮುಂಬೈಗೆ ವಿಮಾನದಲ್ಲಿ ಬಂದಿಳಿದ ಈ ಹಿರಿ ಜೀವಿಗಳನ್ನು ನೇರವಾಗಿ ತಾಜ್ ಹೋಟೆಲ್ಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಉದ್ಯಮಿಗಳಾದ ಅನಿಲ್ ಜೈನ್, ಸಂಜಯ ಮುತ್ತಾ ಅವರು ಬರಮಾಡಿಕೊಂಡರು. ಹೋಟೆಲ್ ಸಿಬ್ಬಂದಿ ವೃದ್ಧರ ಹಣೆಗೆ ತಿಲಕ ಇಟ್ಟು ಸ್ವಾಗತಿಸಿದ್ದು, ವಿಶೇಷವಾಗಿತ್ತು. ತಾಜ್ ಹೋಟೆಲ್ನಲ್ಲಿ ಉಪಹಾರ ಸೇವಿಸಿದ ಬಳಿಕ ಮುಂಬೈನ ಪ್ರಸಿದ್ಧ ಪ್ರವಾಸಿ ತಾಣಗಳತ್ತ ತೆರಳಿದರು.