ಬೆಂಗಳೂರು:ಡಿಟೆಕ್ಟಿವ್ ಏಜೆನ್ಸಿಗಳ ಹೆಸರಿನಲ್ಲಿ ಅನಧಿಕೃತವಾಗಿ ಸಿಡಿಆರ್ (ಕರೆ ವಿವರಗಳ ದಾಖಲೆ) ಕಲೆಹಾಕುತ್ತಿದ್ದ ಏಳು ಜನ ಆರೋಪಿಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಕುಮಾರ್, ಭರತ್, ಶ್ರೀನಿವಾಸ ವಿ., ಪುರುಷೋತ್ತಮ, ಗುರುಪಾದ್, ರೇವಂತ್ ಹಾಗೂ ತಿಪ್ಪೇಸ್ವಾಮಿ ಬಂಧಿತ ಆರೋಪಿಗಳು. ವಿಜಯನಗರ ಹಾಗೂ ಗೋವಿಂದರಾಜನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸುತ್ತಿದ್ದ ಅಕ್ರಮದ ಮೇಲೆ ಸಿಸಿಬಿ ಹಾಗೂ ವಿಜಯನಗರ ಉಪವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಮಹಾನಗರಿ ಡಿಟೆಕ್ಟಿವ್ & ಸೆಕ್ಯುರಿಟಿ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಪ್ರಕರಣಗಳ ತನಿಖೆ ಕೈಗೊಳ್ಳುವ ತನಿಖಾ ಏಜೆನ್ಸಿಗಳು ಕಾನೂನಾತ್ಮಕವಾಗಿ ಸಿಡಿಆರ್ ಕಲೆಹಾಕುವ ಅಧಿಕಾರ ಹೊಂದಿರುತ್ತವೆ. ಅನಧಿಕೃತವಾಗಿ ಸಿಡಿಆರ್ ಕಲೆ ಹಾಕುವುದು ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ತಂದ ಆರೋಪವಾಗುತ್ತದೆ. ಆದರೆ, ಡಿಟೆಕ್ಟಿವ್ ಏಜೆನ್ಸಿ ಸ್ಥಾಪಿಸುವುದಾಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದ ಆರೋಪಿಗಳು, ಸರ್ಕಾರದ ಪರವಾನಗಿ ಪಡೆಯದೇ ಸರ್ವಿಸ್ ಪ್ರೊವೈಡರ್ ಕಂಪನಿಗಳ ಏಜೆಂಟರ್ಗಳೊಂದಿಗೆ ಶಾಮೀಲಾಗಿ ಬೇರೆ ಬೇರೆ ವ್ಯಕ್ತಿಗಳ ಮೊಬೈಲ್ ನಂಬರ್‌ಗಳ ಸಿಡಿಆರ್ ಕಲೆಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.