ಮೈಸೂರು:''ಬೆಂಗಳೂರಿನಲ್ಲಿ ಟೈಮರ್ ಫಿಕ್ಸ್ ಮಾಡಿ ಬಾಂಬ್ ಸ್ಫೋಟ ಮಾಡಿರುವುದು ನಿಜ. ಬಾಂಬ್ ಬ್ಲಾಸ್ಟ್ನಲ್ಲಿ 9 ಜನರು ಗಾಯಗೊಂಡಿದ್ದಾರೆ. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ನಿನ್ನೆಯೇ ಡಿಸಿಎಂ, ಗೃಹ ಸಚಿವರು ಭೇಟಿ ನೀಡಿದ್ದರು. ಈ ಕೃತ್ಯದಲ್ಲಿ ಸಂಘಟನೆಯ ಕೈವಾಡವಿದೆಯೋ, ಇಲ್ಲವೋ ಎಂಬುದು ತಿಳಿದಿಲ್ಲ. ಈ ಘಟನೆ ಕುರಿತು ಗಂಭೀರವಾಗಿ ತನಿಖೆ ನಡೆಯುತ್ತಿದೆ'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದ ಟಿ.ಕೆ. ಲೇಔಟ್ ಬಳಿ ಇರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮಾಸ್ಕ್, ಟೋಪಿ ಹಾಕಿಕೊಂಡು ವ್ಯಕ್ತಿಯೊಬ್ಬ ಬಸ್ನಲ್ಲಿ ಪ್ರಯಾಣಿಸಿಕೊಂಡು ರಾಮೇಶ್ವರ ಕೆಫೆಗೆ ಬಂದಿದ್ದಾನೆ. ಕೆಫೆಯಲ್ಲಿ ರವೆ ಇಡ್ಲಿ ತೆಗೆದುಕೊಂಡು ಒಂದೆಡೆ ಕುಳಿತುಕೊಂಡು ತಿಂದಿದ್ದಾನೆ. ಬಳಿಕ ಟೈಮರ್ ಅಳವಡಿಸಿ ಹೋಗಿದ್ದಾನೆ. ನಂತರ ಬಾಂಬ್ ಬ್ಲಾಸ್ಟ್ ಆಗಿದೆ. ವ್ಯಕ್ತಿ ಸಂಚಾರ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾವೆ. ಆ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಈ ಪ್ರಕರಣದ ಕುರಿತು ಸೀರಿಯಸ್ ಆಗಿ ತನಿಖೆ ನಡೆಯುತ್ತಿದೆ. ನಿನ್ನೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಜೊತೆಗೆ ಬಾಂಬ್ ಸ್ಫೋಟಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು (ಶನಿವಾರ) ನಾನು ಕೂಡ ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ತೆರಳುತ್ತೇನೆ'' ಎಂದರು.