ಬೆಂಗಳೂರು :ಗುರುವಾರದಿಂದ ಪ್ರಾರಂಭವಾಗಿರುವ ಕೃಷಿ ಮೇಳದಲ್ಲಿ ಹಣ್ಣಿನ ಬೆಳೆಗಳು, ಹೂವು ಹಾಗೂ ತರಕಾರಿ ಬೆಳೆಗಳಿಗೆ ಔಷಧ ಸಿಂಪಡಿಸಲು ಕೃಷಿ ವಿವಿ ಸೆನ್ಸಾರ್ ಆಧಾರಿತ ಸ್ವಯಂಚಾಲಿತ ಬೂಮ್ ಸ್ಪ್ರೇಯರ್ವೊಂದನ್ನ ಪರಿಚಯಿಸಿದೆ.
ರೈತರಿಗೆ ಉಪಯೋಗವಾಗುವಂತಹ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ಅಗತ್ಯತೆಗೆ ಅನುಗುಣವಾಗಿ ಸಿಂಪಡಿಸುವ ಯಂತ್ರ ಇದಾಗಿದೆ. ಬೆಳೆ ಮತ್ತು ರೋಗಕ್ಕೆ ಅನುಗುಣವಾಗಿ ಎಷ್ಟು ಪ್ರಮಾಣದಲ್ಲಿ ಔಷಧ ಸಿಂಪಡಿಸಬೇಕೆಂಬುದನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ಒಮ್ಮೆ ಸಿಂಪಡಿಸಿದ ಜಾಗದಲ್ಲಿ ಮತ್ತೆ ವಾಹನ ಸಾಗಿದಾಗ ಔಷಧ ಸಿಂಪಡನೆ ಮಾಡದಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಾಸಿಲ್‌ಗಳು ತಾನಾಗಿಯೇ ಮುಚ್ಚಿಕೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದೆ.
ಟ್ರ್ಯಾಕ್ಟರ್‌ನಲ್ಲಿ ಸುಮಾರು 400 ಲೀಟರ್ ಸಾಮರ್ಥ್ಯದ ಬೂಮ್ ಸ್ಪ್ರೇಯರ್ ಟ್ಯಾಂಕ್ ಅಳವಡಿಸಬಹುದಾಗಿದೆ. ಈ ಬೂಮ್ ಸ್ಪ್ರೇಯರ್ನಲ್ಲಿ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಮತ್ತು ಸೆನ್ಸಾರ್ ಕಿಟ್ ಅನ್ನು ಅಳವಡಿಸಿ, ಪರಸ್ಪರ ಸಂಪರ್ಕ ಕಲ್ಪಿಸಲಾಗಿದೆ. ಕಂಪ್ಯೂಟರ್ ಮ್ಯಾಪ್ ಅನ್ನು ಸಹ ಅಳವಡಿಸಲಾಗಿದೆ. ಈ ಮ್ಯಾಪ್ ಔಷಧ ಸಿಂಪಡಣೆ ಕುರಿತು ಅಗತ್ಯ ವಿವರಗಳನ್ನು ಪ್ರದರ್ಶಿಸುತ್ತದೆ.
15 ನಿಮಿಷಗಳಲ್ಲಿ ಒಂದು ಎಕರೆ ವಿಸ್ತೀರ್ಣಕ್ಕೆ ದ್ರಾವಣ ಸಿಂಪಡಣೆ: ಕೀಟನಾಶಕ, ಬ್ಯಾಕ್ಟೀರಿಯಾ ನಾಶಕ ಮತ್ತು ದ್ರವ ರಸಗೊಬ್ಬರಗಳ ಬಳಕೆಗೆ ಬಳಸಬಹುದಾಗಿದೆ. ಈ ಉಪಕರಣ ಪ್ರಮುಖವಾಗಿ ಶಿಫಾರಸು ಮಾಡಿದ ದ್ರವರೂಪಿ ಔಷಧ, ಗೊಬ್ಬರಗಳ ನಕ್ಷೆಯನ್ನು ಓದುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ. ಈ ಉಪಕರಣ ಸುಮಾರು 15 ನಿಮಿಷಗಳಲ್ಲಿ ಒಂದು ಎಕರೆ ವಿಸ್ತೀರ್ಣಕ್ಕೆ ದ್ರಾವಣ ಸಿಂಪಡಿಸಲಿದೆ.
ಸೆನ್ಸಾರ್ ಆಧಾರಿತ ಸ್ವಯಂಚಾಲಿತ ಬೂಮ್ ಸ್ಪ್ರೇಯರ್ (ETV Bharat) ನಾಸಿಲ್‌ಗಳಿಗೆ ಸೆನ್ಸಾರ್ ಅಳವಡಿಕೆ :ದ್ರವ ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳುವ ಟ್ಯಾಂಕರ್‌ನ ಎಡ ಮತ್ತು ಬಲ ಭಾಗದಲ್ಲಿ ಸುಮಾರು 9 ಮೀಟರ್ ಅಗಲದ ವಿಸ್ತೀರ್ಣದಲ್ಲಿ 18 ನಾಸಿಲ್‌ಗಳನ್ನು ಅಳವಡಿಸಲಾಗಿದೆ. ಈ ನಾಸಿಲ್‌ಗಳಿಗೆ ಸೆನ್ಸಾರ್ ಅಳವಡಿಸಲಾಗಿದ್ದು, ಬೆಳೆಯ ಸಾಲುಗಳ ಮಧ್ಯೆ ಟ್ರ್ಯಾಕ್ಟರ್ ಸಾಗುವಾಗ ಎಲ್ಲಿ, ಯಾವಾಗ ಔಷಧದ ಅಗತ್ಯವಿದೆಯೋ ಆಗ ನಾಸಿಲ್‌ಗಳು ತಾನಾಗಿಯೇ ತೆರೆದುಕೊಂಡು ಸಿಂಪಡಿಸುವ ಪ್ರಕ್ರಿಯೆ ನಡೆಸುತ್ತದೆ. ಕೆಲಸ ಮುಗಿದ ನಂತರ ತಾನಾಗಿಯೇ ಮುಚ್ಚಿಕೊಳ್ಳುತ್ತವೆ.
''ಸ್ವಯಂಚಾಲಿತ ಬೂಮ್ ಸ್ಪ್ರೇಯರ್ ಸದ್ಯ ಪರೀಕ್ಷಾರ್ಥವಾಗಿ ಬಳಕೆ ಮಾಡಲಾಗುತ್ತಿದ್ದು, ಪ್ರಾಯೋಗಿಕ ಹಂತದಲ್ಲಿನ ಸಾಧಕ - ಬಾಧಕಗಳನ್ನು ಪರಿಶೀಲಿಸಿ, ಅದಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿದ ನಂತರ, ದರ ನಿಗದಿಪಡಿಸಲಾಗುವುದು'' ಎಂದು ಕೃಷಿ ವಿವಿ ಕುಲಪತಿ ಡಾ. ಎಸ್. ವಿ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ :ವಿಜಯಪುರದಲ್ಲಿ ಕೃಷಿ ಮೇಳ: ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಕರೆ