ಬೆಂಗಳೂರು: ಪ್ರಸಕ್ತ ಸಾಲಿನ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಹಿರಿಯ ರಾಜಕಾರಣಿ, ಮಾಜಿ ಸಚಿವ ಎಸ್.ಕೆ.ಕಾಂತ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ತಿಳಿಸಿದ್ದಾರೆ.
ವಿಕಾಸಸೌಧ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಆಗಸ್ಟ್ 20ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್.ಕೆ.ಕಾಂತ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.
ಎಸ್.ಕೆ.ಕಾಂತ ಅವರ ಹಿನ್ನೆಲೆ:ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಹಾಗರಗುಂಡಗಿಯಲ್ಲಿ 1938 ರಲ್ಲಿ ಜನಿಸಿದ ಎಸ್.ಕೆ.ಕಾಂತ ಅವರು, ಶೋಷಿತರ, ಕೂಲಿ ಕಾರ್ಮಿಕರ, ದಮನಿತರ ಧ್ವನಿಯಾಗಿ ದುಡಿಯುತ್ತಿದ್ದಾರೆ. ಪಾನ ನಿಷೇಧ, ಜಾತೀಯತೆ, ಶೋಷಣೆ, ಕಂದಾಚಾರ, ಮೂಢನಂಬಿಕೆ, ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಈಗಲೂ ಹೋರಾಟ ನಡೆಸುತ್ತಿದ್ದಾರೆ. ಅಮಾಯಕ, ಅಲಕ್ಷಿತ, ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸಿ ಸಹಸ್ರಾರು ಕುಟುಂಬಗಳಿಗೆ ನೆರವಾಗಿದ್ದಾರೆ.
ಪ್ರಾಥಮಿಕ ಶಾಲೆಗೆ ಓದಲು ಕಲಬುರಗಿಗೆ ಬಂದ ಕಾಂತ ಮನೆಯ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಶಾಲೆ ಬಿಟ್ಟು ಎಂ.ಎಸ್.ಕೆ. ಮಿಲ್ನಲ್ಲಿ ಕಾರ್ಮಿಕರಾಗಿ ಸೇರಿದ್ದರು. 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷಕ್ಕೆ ಸೇರಿದರು. ಮಿಲ್ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯಕ್ಕೆ ಪ್ರತಿಭಟಿಸಿ ಸತ್ಯಾಗ್ರಹ ಆರಂಭಿಸಿ ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡರು. ರಾಜಕೀಯಕ್ಕೆ ಬಂದು ಶಾಸಕರಾಗಿ ಆಯ್ಕೆಯಾಗಿ 1986ರಲ್ಲಿ ಕಾರ್ಮಿಕ ಸಚಿವರಾಗಿ ಅಧಿಕಾರಕ್ಕೆ ಬಂದರೂ ತಾವು ಕಾರ್ಮಿಕರ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಕಾರಣ 18 ತಿಂಗಳಿಗೆ ಮಂತ್ರಿ ಸ್ಥಾನ ಕೊನೆಯಾಯಿತು. ಅವರೊಂದಿಗೆ ಎಂಪಿ ಪ್ರಕಾಶ್ ಮತ್ತು ಸಿದ್ದರಾಮಯ್ಯ ಅವರು ಹೆಗಡೆ ಸಂಪುಟವನ್ನು ಸೇರಿದ್ದರು.