ಕಾರವಾರ(ಉತ್ತರ ಕನ್ನಡ):ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದೆ. ರಾಡರ್ (ಜಿಪಿಆರ್) ಬಳಸಿ ಮಣ್ಣಿನಡಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ, ಬದುಕುಳಿದವರ ಅಥವಾ ಲಾರಿಯ ಬಗೆಗಿನ ಕುರುಹು ಇನ್ನೂ ಪತ್ತೆಯಾಗಿಲ್ಲ.
ಜು.16 ರಂದೇ ಮಣ್ಣು ಕುಸಿದು ದುರ್ಘಟನೆ ಸಂಭವಿಸಿದರೂ ನಾಪತ್ತೆಯಾದ 10 ಮಂದಿ ಪೈಕಿ 7 ಮಂದಿಯ ಶವಗಳು ಮಾತ್ರ ಇದುವರೆಗೂ ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಭಾನುವಾರದಿಂದ ಸೇನೆ ಕೂಡ ಕಾರ್ಯಾಚರಣೆಗಿಳಿದಿದೆ. ಇವರ ಜೊತೆಗೆ ಎನ್‌ಡಿಆರ್‌ಎಫ್‌ನ 29 ಮಂದಿ, ಎಸ್‌ಡಿಆರ್‌ಎಫ್‌ನ 42 ಮಂದಿ, ಭಾರತೀಯ ನೌಕಾಪಡೆಯ 12 ಡೀಪ್ ಡೈವರ್‌ಗಳು ಮತ್ತು ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ವಿಭಾಗದ ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ಹೆದ್ದಾರಿ ಮೇಲೆ ಒಂದು ಬದಿ ಬಿದ್ದಿದ್ದ ಮಣ್ಣನ್ನು 10ಕ್ಕೂ ಹೆಚ್ಚು ಜೆಸಿಬಿ ಹಾಗೂ ಅಷ್ಟೇ ಟಿಪ್ಪರ್ ಬಳಸಿ ಸಂಪೂರ್ಣ ತೆರವು ಮಾಡಲಾಗಿದೆ. ಇನ್ನೊಂದು ಬದಿಯಲ್ಲಿ ನಾಪತ್ತೆಯಾದವರು ಹಾಗೂ ಲಾರಿಗಾಗಿ ಹುಡುಕಾಟ ಮುಂದುವರಿಸಲಾಗಿದೆ. ಸೇನಾ ಸಿಬ್ಬಂದಿ ಕೂಡ ಈ ಭಾಗದಲ್ಲಿ ರಾಡರ್ ಮೂಲಕ ಹುಡುಕಾಟ ನಡೆಸಿದರಾದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದೀಗ ಹೆದ್ದಾರಿಯ ಇನ್ನೊಂದು ಬದಿಯಲ್ಲಿಯೂ ನಡೆಸಿದ ಹುಡುಕಾಟ ಬಹುತೇಕ ಪೂರ್ಣಗೊಂಡಿದ್ದು, ಯಾವುದೇ ಕುರುಹು ಸಿಕ್ಕಿಲ್ಲ.
ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆ ಗಮನ ಹರಿಸಿರುವ ಸೇನೆ, ನದಿಯ ಮುಂಭಾಗದಲ್ಲಿ ಹುಡುಕಾಟ ಮುಂದುವರಿಸಿದೆ. ನೌಕಾಪಡೆಯಿಂದ ಆಗಮಿಸಿದ ತಜ್ಞರ ತಂಡ ಭೂಮಿ ಮತ್ತು ನೀರಿನಲ್ಲಿ ಕಾರ್ಯಾಚರಣೆ ಮುಂದುವರೆಸಿದೆ. ಡೀಪ್ ಡೈವರ್‌ಗಳು ನದಿಯಲ್ಲಿ ಟ್ರಕ್ ಕ್ಯಾಬಿನ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಘಟನೆ ನಡೆದು 7 ದಿನ ಕಳೆದಿದ್ದು, ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಉಳುವರೆಯ ಸಣ್ಣಿ ಗೌಡ ಹಾಗೂ ಹೋಟೆಲ್ನಲ್ಲಿದ್ದ ಜಗನ್ನಾಥ ಮತ್ತು ಲಾರಿಗಾಗಿ ಹುಡುಕಾಟ ಮುಂದುವರೆದಿದೆ. ಈ ನಡುವೆ ಅಂಕೋಲಾದ ಲಾರಿ ಚಾಲಕರು ಕಾರ್ಯಾಚರಣೆ ವಿಳಂಬವಾಗಿದೆ ಎಂದು ಆರೋಪಿಸಿ ಶಾಸಕ ಸತೀಶ್ ಸೈಲ್ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ ಪ್ರಕರಣ: ಯಾರೇ ತಪ್ಪು ಮಾಡಿದ್ದರೂ ಕ್ರಮ - ಸಿಎಂ ಸಿದ್ದರಾಮಯ್ಯ - SHIRURU HILL COLLAPSE TRAGEDY