ಮೈಸೂರು :ಶಿಲ್ಪಿ ಅರುಣ್ ಯೋಗಿರಾಜ್ ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ. ನಂತರ ಅಯೋಧ್ಯೆಯಲ್ಲಿ ತಾನು ಕೆತ್ತಿದ ಬಾಲರಾಮ ಮೂರ್ತಿಯ ಫೋಟೋಗಳನ್ನು ತೋರಿಸಿ, ಅದರ ವಿಶೇಷತೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ್ದಾರೆ.
ಶ್ರದ್ಧೆಯಿಂದ ಬಾಲರಾಮನನ್ನ ಮಾಡಿದ್ದಾರೆ - ಸುತ್ತೂರು ಶ್ರೀ:ಶ್ರೀರಾಮ ಎಲ್ಲರೂ ಇಷ್ಟಪಡುವ ವ್ಯಕ್ತಿ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ದಕ್ಷಿಣ ಹಾಗೂ ಉತ್ತರ ಭಾರತದ ವಾಸ್ತುಶಿಲ್ಪದ ಸಮ್ಮಿಲನವಾಗಿ ರೂಪಿತವಾಗಿದೆ ಎಂದು ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ. ನಾನು ಅಯೋಧ್ಯೆಗೆ ಹೋದರೂ ರಾಮ ಮಂದಿರ ನೋಡಲು ಸಾಧ್ಯವಾಗಲಿಲ್ಲ. ರಾಮ ಮಂದಿರಕ್ಕೆ ಹೋದರೆ ರಾಮಾಯಣ, ಮಹಾಭಾರತದ ಸನ್ನಿವೇಶಗಳು ನೋಡಲು ಸಿಗುತ್ತವೆ. ಈಗ ದೇವಾಲಯದ 30 ರಷ್ಟು ಕೆಲಸ ಮುಗಿದಿದೆ. ಶೇಕಡಾ 70ರಷ್ಟು ಕಾಮಗಾರಿಗಳು ನಡೆಯುತ್ತಿವೆ. ಮಂದಿರ ಸುಂದರವಾಗಿದೆ. ಶಿಲ್ಪಿ ಅರುಣ್ ಅದ್ಭುತ ಕಲಾವಿದ. ಬಾಲರಾಮನನ್ನ ಅದ್ಭುತವಾಗಿ ಕೆತ್ತಿದ್ದಾರೆ ಎಂದು ಹೇಳಿದ್ದಾರೆ. ಅರುಣ್ ಯೋಗಿರಾಜ್ ಅವರು ಜೆಎಸ್ಎಸ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಇಂತಹ ಶಿಲ್ಪಿಯ ಮೂರ್ತಿ ಜನ ಮನ್ನಣೆ ಪಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.