ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅರ್ಚಕರು ಹಾಗೂ ನೌಕರರ ಮಕ್ಕಳಿಗೆ ಜೂನ್ ಬಳಿಕ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯ ನೋಂದಾಯಿತ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷದ ಸದಸ್ಯ ಪ್ರತಾಪ್ ಸಿಂಹನಾಯಕ್ ಸರ್ಕಾರದ ಗಮನ ಸೆಳೆದ ಸೂಚನೆ ವೇಳೆ ಸಚಿವರು ಉತ್ತರಿಸಿದರು.
ಅರ್ಚಕ, ನೌಕರರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಈ ವರ್ಷದಿಂದಲೇ ನೀಡಲು ಸರ್ಕಾರ ಮಂಜೂರಾತಿ ನೀಡಿದೆ. ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ಜಮಾ ಮಾಡಿ (ಡಿಬಿಟಿ) ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಸಿ ವರ್ಗದ ಅರ್ಚಕ/ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ (ಒಟ್ಟು ವರ್ಷದಲ್ಲಿ 2,200 ಜನರಿಗೆ) ಭಾರತ್ ಗೌರವ್ ಕಾಶಿ ಯಾತ್ರೆ ಹಾಗೂ ದಕ್ಷಿಣ ಭಾರತ ಯಾತ್ರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸಿ ವರ್ಗದ ಅನುವಂಶಿಕ ಅರ್ಚಕರಿಗೆ ವಯಸ್ಸಾಗಿದ್ದು ಹಾಗೂ ಅನಾರೋಗ್ಯದ ನಿಮಿತ್ತ ಪೂಜೆ ಮಾಡಲು ಅಶಕ್ತರಾಗಿದ್ದರೆ ಅವರ ಅನುವಂಶಿಕ ಹಕ್ಕು (ನೇಮಕಾತಿ) ವರ್ಗಾಯಿಸಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.
ಸೇವೆಯಲ್ಲಿರುವಾಗ ಮರಣ ಹೊಂದಿದ ನೌಕರರಿಗೆ ರೂ. 2 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ರಾಜ್ಯದಲ್ಲಿ ಎ ವರ್ಗದಡಿ 205, ಬಿ ವರ್ಗದಡಿ 193 ಹಾಗೂ ಸಿ ವರ್ಗದಡಿ 34, 165 ಪ್ರವರ್ಗದ ದೇವಾಲಯಗಳಿವೆ. ದೇವಸ್ಥಾನಗಳಿಂದ ಬರುವ ಹಣವನ್ನು ಆಯಾ ದೇವಾಲಯಗಳಿಗೆ ವಿನಿಯೋಗಿಸಲಾಗುತ್ತಿದೆ. ಹೆಚ್ಚುವರಿ ಹಣವನ್ನು ಆಯಾ ದೇವಾಲಯದ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು.