ಕರ್ನಾಟಕ

karnataka

ETV Bharat / state

ಎಂ.ಎಂ.ಕಲಬುರ್ಗಿ ಕೊಲೆ ಪ್ರಕರಣದ 3ನೇ ಆರೋಪಿಯಿಂದ ಜಾಮೀನು ಅರ್ಜಿ, ಸರ್ಕಾರಕ್ಕೆ ನೋಟಿಸ್

ಡಾ.ಎಂ.ಎಂ.ಕಲಬುರ್ಗಿ ಅವರ ಕೊಲೆ ಪ್ರಕರಣದ 3ನೇ ಆರೋಪಿ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಧಾರವಾಡ ಪೀಠ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

SCHOLAR MURDER CASE
ಎಂ.ಎಂ.ಕಲಬುರ್ಗಿ ಕೊಲೆ ಪ್ರಕರಣ (ETV Bharat)

By ETV Bharat Karnataka Team

Published : Oct 9, 2024, 8:12 PM IST

ಬೆಂಗಳೂರು:ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಕೊಲೆ ಪ್ರಕರಣದ ಮೂರನೇ ಆರೋಪಿ ಪ್ರವೀಣ್‌ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಇಂದು ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

ಬೆಳಗಾವಿಯ ಪ್ರವೀಣ್‌ ಎಂಬಾತ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಧಾರವಾಡ ಪೀಠದ ಏಕಸದಸ್ಯ ಪೀಠ, ನೋಟಿಸ್​ ನೀಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.

ಪ್ರಕರಣದ ಮೊದಲನೇ ಆರೋಪಿ ಅಮೋಲ್‌ ಕಾಳೆ ಕಲಬುರ್ಗಿ ಅವರನ್ನು ಗುಂಡಿಟ್ಟು ಕೊಂದಿದ್ದ ಆರೋಪ ಎದುರಿಸುತ್ತಿದ್ದಾನೆ. ಕಲಬುರ್ಗಿ ಅವರ ಮನೆಗೆ ಕಾಳೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಬಂದು ಕೊಲೆಗೈದ ಬಳಿಕ, ಆತನನ್ನು ಕರೆದೊಯ್ದ ಆರೋಪ ಪ್ರವೀಣ್‌ ಮೇಲಿದೆ.

ಪ್ರವೀಣ್‌ ಈ ಹಿಂದೆ ಎರಡು ಬಾರಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕೋರಿಕೆಯಂತೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ವಿಚಾರ ರಾಜ್ಯ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಹಿಂದಿನ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಹೇಳಿದ್ದನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿತ್ತು.

ನಾಲ್ಕನೇ ಆರೋಪಿ ವಾಸುದೇವ್‌ ಭಗವಾನ್‌ ಸೂರ್ಯವಂಶಿ ಅಲಿಯಾಸ್‌ ವಾಸು ಅಲಿಯಾಸ್‌ ಮೆಕ್ಯಾನಿಕ್‌ ಹಾಗೂ ಆರನೇ ಆರೋಪಿ ಅಮಿತ್‌ ಬಡ್ಡಿ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಗೋವಿಂದ್‌ ಎಂಬವರಿಗೆ ಕಳೆದ ಜುಲೈ 23ರಂದು ಹೈಕೋರ್ಟ್‌ ಜಾಮೀನು ನೀಡಿದೆ.

ಅಲ್ಲದೇ, ಕಲಬುರ್ಗಿ ಹತ್ಯೆ ಪ್ರಕರಣದ ತುರ್ತು ವಿಚಾರಣೆಗೆ ವಿಶೇಷ ನ್ಯಾಯಾಲಯ ತೆರೆಯುವ ಸರ್ಕಾರದ ಕೋರಿಕೆಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಪ್ರವೀಣ್‌ ಕಳೆದ 2019ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. 138 ಸಾಕ್ಷಿಗಳ ಪೈಕಿ ಸದ್ಯ 28ನೇ ಸಾಕ್ಷಿಯ ವಿಚಾರಣೆ ನಡೆದಿರುವುದರಿಂದ ಜಾಮೀನು ಪಡೆಯುವ ಆಶಾಭಾವ ಹೊಂದಿದ್ದಾನೆ.

ಪ್ರಕರಣದ ಹಿನ್ನೆಲೆ: 2015ರ ಆಗಸ್ಟ್​ 30ರಂದು ಬೆಳಗ್ಗೆ ಮನೆಯಲ್ಲಿದ್ದ ಎಂ.ಎಂ.ಕಲಬುರ್ಗಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಪುತ್ರಿ ರೂಪದರ್ಶಿನಿ ಕಿಣಗಿ ಅವರು ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಇಬ್ಬರು ಅನಾಮಧೇಯರ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ ಅಮೋಲ್‌ ಕಾಳೆ, ಗಣೇಶ್‌ ಮಿಸ್ಕಿನ್‌, ಪ್ರವೀಣ್‌ ಮಸಲಾವಾಲಾ, ವಾಸುದೇವ ಸೂರ್ಯವಂಶಿ, ಶರದ್‌ ಕಲಾಸ್ಕರ್‌ ಮತ್ತು ಅಮಿತ್‌ ಬಡ್ಡಿ ಎಂಬವರ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳು, ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.

ಇದನ್ನೂ ಓದಿ: ಎಂ. ಎಂ ಕಲಬುರ್ಗಿ, ಗೌರಿ ಲಂಕೇಶ್​ ಕೊಲೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು - High Court grants bail to accused

ABOUT THE AUTHOR

...view details