ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಹಗರಣ ಕುರಿತಂತೆ ತನಿಖೆ ನಡೆಸಲು ಸರ್ಕಾರವು ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕವ್ಯಕ್ತಿ ಆಯೋಗದಿಂದ ತನಿಖೆ ಪೂರ್ಣಗೊಳಿಸಲು ಹೈಕೋರ್ಟ್ ಆರು ವಾರಗಳ ಕಾಲ ಕೊನೆಯ ಅವಕಾಶ ನೀಡಿದೆ.
ಗುತ್ತಿಗೆ ಕಾಮಗಾರಿ ಪೂರ್ಣಗೊಳಿಸಿದ್ದರೂ ಹಣ ಬಿಡುಗಡೆ ಮಾಡದೆ, ನಾಗಮೋಹನದಾಸ್ ನೇತೃತ್ವದ ತನಿಖಾ ಆಯೋಗ ರಚನೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಮೆರ್ಸಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಅರ್ಜಿಗಳ ವಿಚಾರಣೆ ನಡೆಸಿತು.
ಅಲ್ಲದೆ, ಕೆಲಸ ಮಾಡದೇ ಬಿಲ್ ನೀಡಿ ಎಂದು ಸೂಚನೆ ನೀಡುವುದು ಸರಿಯಲ್ಲ. ಆದರೆ, ಕಾಮಗಾರಿ ಪೂರ್ಣಗೊಂಡಿದ್ದರೂ ಯಾಕೆ ಬಿಲ್ ಪಾವತಿ ಮಾಡುತ್ತಿಲ್ಲ. ಕೆಲಸ ಮಾಡಿಲ್ಲವೆಂದರೆ ಬಿಲ್ ತಡೆಹಿಡಿದರೆ ಅರ್ಥವಿದೆ. ಕಾಮಗಾರಿ ಮುಗಿದ ಮೇಲೂ ಬಿಲ್ ನೀಡುತ್ತಿಲ್ಲ. ಇನ್ನೂ ಎಷ್ಟು ದಿನ ತನಿಖೆ ನಡೆಯಬೇಕು ಎಂದು ಪೀಠ ಪ್ರಶ್ನೆ ಮಾಡಿತು.
ಜತೆಗೆ, ಇದೇ ಕೊನೆಯ ಅವಕಾಶವಾಗಿದ್ದು, ಮತ್ತೊಂದು ಅವಕಾಶ ನೀಡಲಾಗುವುದಿಲ್ಲ. ಒಂದು ವೇಳೆ ಮುಂದಿನ ವಿಚಾರಣೆ ವೇಳೆಗೆ ವಿಚಾರಣಾ ವರದಿ ನೀಡದಿದ್ದಲ್ಲಿ ಸೂಕ್ತ ಆದೇಶ ಮಾಡಲಾಗುವುದು. ವಿಚಾರಣಾ ವರದಿ ನೀಡದಿದ್ದಲ್ಲಿ ಶೇ. 100 ಬಿಲ್ ಪಾವತಿಗೆ ಹೈಕೋರ್ಟ್ ಆದೇಶ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.
ವಿಚಾರಣೆ ವೇಳೆ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, "ಆರೋಪ ಇರುವ ಕಾಮಗಾರಿಗಳಲ್ಲಿ ಶೇ. 50 ಬಿಲ್ ನೀಡಲಾಗಿದೆ. ಆರೋಪ ಇಲ್ಲದ ಕಾಮಗಾರಿಗಳಲ್ಲಿ ಶೇ.75 ಬಿಲ್ ಮಂಜೂರು ಮಾಡಲಾಗಿದೆ" ಎಂದು ವಿವರಿಸಿದರು.