ಮಂಡ್ಯ: ಬರದಿಂದ ತತ್ತರಿಸಿರುವ ಜನ-ಜಾನುವಾರುಗಳಿಗೆ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಒತ್ತಾಯಿಸಿ ತಾಲೂಕಿನ ಮರಿಲಿಂನದೊಡ್ಡಿ ಗ್ರಾಮಸ್ಥರು ಇಂದು ಉಪವಾಸ ಸತ್ಯಾಗ್ರಹ ನಡೆಸಿದರು. ಗ್ರಾಮದ ಬಸ್ ನಿಲ್ದಾಣದ ಬಳಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಳೆ ಕೊರತೆಯಿಂದಾಗಿ ನೀರಿನ ಅಭಾವ ಸೃಷ್ಟಿಯಾಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆ ಇರುವುದರಿಂದ ರೈತರು ಹೊಸ ಬೆಳೆ ಹಾಕಬಾರದು ಎಂದು ಸರ್ಕಾರ ನಿರ್ಬಂಧ ಹಾಕಿದ್ದರಿಂದ ಯಾವುದೇ ಬೆಳೆಯನ್ನು ರೈತರು ಬೆಳೆದಿಲ್ಲ. ಇರುವ ನೀರನ್ನೆಲ್ಲಾ ತಮಿಳುನಾಡಿಗೆ ಹರಿಸಿದ ಪರಿಣಾಮ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಬೆಳೆದು ನಿಂತಿರುವ ಬೆಳೆ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ 90 ಅಡಿ ಇದ್ದಾಗ ನಾಲೆಗಳಿಗೆ ಒಂದು ಕಂತು ನೀರು ಬಿಡಬೇಕಾಗಿತ್ತು. ಆದರೆ ಸರ್ಕಾರ ನಾಲೆಗಳಿಗೆ ನೀರು ಹರಿಸದೆ ತೊಂದರೆ ಉಂಟುಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.