ಕರ್ನಾಟಕ

karnataka

By ETV Bharat Karnataka Team

Published : Mar 26, 2024, 7:12 PM IST

Updated : Mar 26, 2024, 7:32 PM IST

ETV Bharat / state

ಮೃಣಾಲ್, ಪ್ರಿಯಾಂಕಾ ಎಂಪಿ‌ ಆಗುವುದರಲ್ಲಿ ಸಂಶಯವೇ ಇಲ್ಲ: ಸಚಿವ ಸತೀಶ್​ ಜಾರಕಿಹೊಳಿ‌ - Lokashaba election

ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸುತ್ತಿರುವ ಕಾಂಗ್ರೆಸ್​ ಅಭ್ಯರ್ಥಿಗಳಾದ ಮೃಣಾಲ್ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಸತೀತ್​ ಜಾರಕಿಹೊಳಿ‌ ಭವಿಷ್ಯ ನುಡಿದಿದ್ದಾರೆ.

ಸಚಿವ ಸತೀಶ್​ ಜಾರಕಿಹೊಳಿ‌
ಸಚಿವ ಸತೀಶ್​ ಜಾರಕಿಹೊಳಿ‌

ಮೃಣಾಲ್ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ

ಬೆಳಗಾವಿ :ಮೃಣಾಲ್ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಸಂಸದರಾಗುವುದರಲ್ಲಿ ಸಂಶಯವೇ ಇಲ್ಲ. ಚಿಕ್ಕ ವಯಸ್ಸಿನ ಸಂಸದರನ್ನು ಸಂಸತ್ತಿಗೆ ಕಳಿಸಿಕೊಟ್ಟ ಶ್ರೇಯಸ್ಸು ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಿಗೆ ಸಲ್ಲಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆ ನಡೆದ ಬೆಳಗಾವಿ ಉತ್ತರ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೃಣಾಲ್ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮ ಭವಿಷ್ಯವನ್ನು ತ್ಯಾಗ ಮಾಡಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎಂಪಿ ಆಗುವ ಅವಶ್ಯಕತೆ ಇರಲಿಲ್ಲ. ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಆರಾಮವಾಗಿ ಇರಬಹುದಿತ್ತು. ಆದರೆ, ನಮ್ಮ ಒತ್ತಾಯಕ್ಕೆ ಜನರ ಸೇವೆ ಮಾಡಲು ಚುನಾವಣೆಯ ಕಣಕ್ಕೆ ಧುಮುಕಿದ್ದಾರೆ. ಒಂದಿಷ್ಟು ಜನರು ಇವ್ರು ಸಣ್ಣವರು ಎನ್ನುತ್ತಿದ್ದಾರೆ. ಈಗ ಸಣ್ಣವರೇ ಮುಂದೆ ದೊಡ್ಡವರಾಗುತ್ತಾರೆ. ರಾಜಕೀಯ ಹೊಸದಾಗಿ ಇರಬಹುದು. ಆದರೆ, ನಾಲ್ಕೈದು ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದಾರೆ.‌ ಕೊರೊನಾ, ಪ್ರವಾಹ ಸಂದರ್ಭದಲ್ಲಿ ಜನರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಎರಡೂ ಕ್ಷೇತ್ರಗಳನ್ನು ಗೆಲ್ಲಿಸುವ ಸಂದೇಶ ಹೈಕಮಾಂಡ್ ನಿಂದ ನಮಗೆ ಬಂದಿದೆ‌. 50 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದೇವೆ. ಜನರ ಜೀವನ ಮಟ್ಟ ಎತ್ತರಿಸಿದ್ದೇವೆ. ಈಗ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. 10 ವರ್ಷಗಳ ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಸತೀಶ್​ ಜಾರಕಿಹೊಳಿ ಕರೆ ನೀಡಿದರು.

ಬಿಜೆಪಿಯವರು ನೀಡಿದ್ದ ಒಂದೇ ಒಂದು ಭರವಸೆ ಈಡೇರಿಸಿಲ್ಲ. ಬುಲೆಟ್ ಟ್ರೇನ್, ರೈತರ ಆದಾಯ ದ್ವಿಗುಣ, ಪ್ರತಿಯೊಬ್ಬರಿಗೆ 15 ಲಕ್ಷ ರೂ., ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ವಾಪಸ್​ ತರುವುದು ಸೇರಿ ಅನೇಕ ಭರವಸೆ ಕೊಟ್ಟಿದ್ದರು. ಆದರೆ, ಏನೂ ಮಾಡಿಲ್ಲ. ಮಹಿಳೆಯರು, ಬಡವರು, ಎಸ್ಸಿ, ಎಸ್ಟಿಗಳಿಗೆ ಏನು ಮಾಡಿದ್ದಾರೆ..? ಪುಷ್ಪಕ ವಿಮಾನದ ಕಥೆ ಅಷ್ಟೇ ಎಂದು ಹೇಳಿದ್ದಾರೆ. ಜಲಾಶಯ, ಇಸ್ರೋ, ವಿಶ್ವವಿದ್ಯಾಲಯ, ಐಐಟಿ ಸೇರಿ ಅನೇಕ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಮಾಡಿದ ಅಭಿವೃದ್ಧಿಯಿಂದ ಇಂದು ಭಾರತ ವಿಶ್ವಗುರು ಆಗಿದೆ. ಮೃಣಾಲ್ ಭವಿಷ್ಯದ ನಾಯಕ. ಮುಂದೆ ಪಕ್ಷ ಮತ್ತು ಜಿಲ್ಲೆಗೆ ದೊಡ್ಡ ಆಸ್ತಿಯಾಗಲಿದ್ದಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದರು.

ನನ್ನ ಪುತ್ರ ಲೋಕಲ್ :ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೆಳಗಾವಿ ಪುತ್ರ, ಲೋಕಲ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆ ಆಶೀರ್ವಾದ ಮಾಡಬೇಕು. ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳನ್ನು ಈ ಬಾರಿ ಖಂಡಿತವಾಗಲೂ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಮ್ಮ ಗ್ಯಾರಂಟಿ ಯೋಜನೆಗಳಿಂದ ತಮಗೆ ಉಪಯೋಗ ಆಗಿದೆಯೋ ಇಲ್ಲವೆಂದು ನೆರೆದಿದ್ದ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದಾಗ ಕೈ ಮೇಲೆ ಎತ್ತಿ ನಮಗೆ ಉಪಯೋಗ ಆಗಿದೆ ಎಂಬ ಉತ್ತರ ಮಹಿಳೆಯರಿಂದ ಕೇಳಿ ಬಂತು. ಇಡೀ ವಿಶ್ವದಲ್ಲಿ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆ ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಎರಡನೇ ರಾಜಧಾನಿ ಬೆಳಗಾವಿ ಅಭಿವೃದ್ಧಿ ಬಗ್ಗೆ ದೆಹಲಿಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತುವ ಸಂಸದರ ಅವಶ್ಯಕತೆಯಿದೆ. ಬೆಳಗಾವಿಗೆ ಏನಾದರೂ ಮಾಡಬೇಕು ಎಂಬ ತುಡಿತ ಹೊಂದಿರುವ ಯುವಕ ಮೃಣಾಲ್ ಗೆ ಆಶೀರ್ವಾದ ಮಾಡುವಂತೆ ಕೋರಿದರು.

ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಯುವಕರೇ ಈ ದೇಶದ ಆಸ್ತಿ, ಭವಿಷ್ಯ ಎಂದು ಬೆಳಗಾವಿಯಲ್ಲಿ ನನಗೆ ಮತ್ತು ಚಿಕ್ಕೋಡಿಯಲ್ಲಿ ಸಹೋದರಿ ಪ್ರಿಯಾಂಕಾಗೆ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ನಮ್ಮ ಕಾಂಗ್ರೆಸ್ ಸರ್ಕಾರ ತಲುಪಿಸಿದೆ. ಇದರಿಂದ ಜನ ತುಂಬಾ ಖುಷಿಯಲ್ಲಿದ್ದಾರೆ. ನನಗೊಂದು ಸುವರ್ಣಾವಕಾಶ ಸಿಕ್ಕಿದ್ದು, ದಯವಿಟ್ಟು ನನಗೆ ನೀವು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಅತ್ಯಂತ ಮಹತ್ವದ ಲೋಕಸಭೆ ಚುನಾವಣೆ ಬಂದಿದೆ. ದೇಶ, ರಾಜ್ಯ ಸಂಕಷ್ಟದಲ್ಲಿದೆ. ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಲ್ಲಿ ನಾವೆಲ್ಲಾ ಪ್ರಜ್ಞಾವಂತರು ಸೇರಿದ್ದೇವೆ. ಬೆಳಗಾವಿ ಉತ್ತರ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರ. ಐದು ವರ್ಷ ಯಾವ ಪಕ್ಷ ದೇಶದ ಚುಕ್ಕಾಣಿ ಹಿಡಿಬೇಕು ಎಂಬುದನ್ನು ನಿರ್ಧರಿಸಲು ಈಗ ಅವಕಾಶ ಬಂದಿದೆ. ನಾವು ಲೋಕಸಭೆ ಚುನಾವಣೆಯಲ್ಲಿ ಯೋಚಿಸಿ ಮತ ಹಾಕಬೇಕಿದೆ. ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಮಾಡೋಣ, ಸರ್ವಾಧಿಕಾರವನ್ನು ತೊಡೆದು ಹಾಕಿ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು‌.

ಈ ವೇಳೆ ಬೆಳಗಾವಿ ಉತ್ತರ ಶಾಸಕ ಆಸೀಫ್(ರಾಜು) ಸೇಠ್, ಮಾಜಿ ಸಚಿವರಾದ ಎ.ಬಿ ಪಾಟೀಲ್​, ಶಶಿಕಾಂತ ನಾಯಿಕ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ್, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸನ್ನವರ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ :ಕಬಿನಿ ಹಿನ್ನೀರಿನ ರೆಸಾರ್ಟ್​ನಲ್ಲಿ ಸಿಎಂ ವಾಸ್ತವ್ಯ: ಚುನಾವಣೆ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ - CM siddaramaiah

Last Updated : Mar 26, 2024, 7:32 PM IST

ABOUT THE AUTHOR

...view details