ಬೆಳಗಾವಿ:ಲೋಕಸಭೆ ಚುನಾವಣೆಯಲ್ಲಿ ಡಬಲ್ ಡಿಜಿಟ್ ರೀಚ್ ಆಗದೇ ಇರುವುದಕ್ಕೆ ನಮ್ಮ ನಾಯಕರ ಅತಿಯಾದ ಆತ್ಮವಿಶ್ವಾಸ ಕಾರಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ ನಗರದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಾಯಕರ ನಿರ್ಲಕ್ಷ್ಯ ಹಿನ್ನಡೆಗೆ ಕಾರಣ: ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್ ಆದರೆ ಈ ರೀತಿಯ ಫಲಿತಾಂಶ ನಿರೀಕ್ಷಿತ. ಚುನಾವಣೆಗೆ ಸಮಯ ಕಡಿಮೆ ಇರುತ್ತದೆ. ಆ ಸಮಯದಲ್ಲಿ ಅಲರ್ಟ್ ಆಗಿರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ. ಆಗಲೇ ನಾವು ಕೆಲಸ ಮಾಡಬೇಕು. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನಡೆಗೆ ಕಾರಣ. ಗೆಲ್ಲುವ ವಿಶ್ವಾಸದ ಕಾರಣಕ್ಕೆ ಇನ್ನೂ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಕಾರ್ಯ ನಡೆಯಲಿಲ್ಲ. ಕೆಲವೆಡೆ ಕಡಿಮೆ ಮತಗಳ ಅಂತರದಿಂದ ಸೋಲಲು ನಮ್ಮ ನಿರ್ಲಕ್ಷ್ಯ ಕಾರಣ ಎಂದರು.
ಲಿಂಗಾಯತ, ಮರಾಠ ಮತ ಸೆಳೆಯಲು ವಿಫಲ: ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣನಲ್ಲ. 5 ಲಕ್ಷ ಲಿಂಗಾಯತ ಮತದಾರರು ಬೆಳಗಾವಿಯಲ್ಲಿದ್ದಾರೆ. ಅವರೇನು ನನ್ನ ಮಾತು ಕೇಳ್ತಾರಾ?. ಬೆಳಗಾವಿ ಕ್ಷೇತ್ರದ ಮತದಾರರನ್ನು ಅಸೆಸ್ ಮಾಡುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಫಲರಾದರು. ಇದೇ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಈ ಸಲ ನಾವು ಗೆಲ್ಲುವ ನಿಟ್ಟಿನಲ್ಲಷ್ಟೇ ಕೆಲಸ ಮಾಡಿದ್ದೇವೆಯೇ ಹೊರತು ಸೋಲಿಸಲು ಅಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ಮೃಣಾಲ್‌ಗೆ ತೀವ್ರ ಹಿನ್ನಡೆ ಆಗಿದೆ. ಲಿಂಗಾಯತ ಹಾಗೂ ಮರಾಠ ಮತಗಳನ್ನು ಸೆಳೆಯಲು ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದು ಹೇಳಿದರು.