ಮೈಸೂರು : ಇನ್ನೂ ನಾಲ್ಕೂವರೆ ವರ್ಷದ ಪುಟ್ಟ ಪೋರಿ ಸಾರಾ ರೋಮಿಯೋ ತನ್ನ ತೊದಲು ನುಡಿಗಳಿಂದ ದೇಶದ ಎಲ್ಲಾ ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು 40 ಸೆಕೆಂಡುಗಳಲ್ಲಿ ಹೇಳುವ ಮೂಲಕ "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್"ನಲ್ಲಿ ದಾಖಲೆ ನಿರ್ಮಿಸಿದ್ದಾಳೆ.
ಮೈಸೂರಿನ ಜೆ.ಪಿ. ನಗರದ ನಿವಾಸಿಗಳಾದ ಮಾಧುರಿ ಮತ್ತು ರೋಮಿಯೋ ಟೈಸನ್ ದಂಪತಿಯ ಪುತ್ರಿ ಸಾರಾ ರೋಮಿಯೋ ಈ ಸಾಧನೆ ಮಾಡಿದ ಬಾಲಕಿ. ತಾಯಿ ಮಾಧುರಿ ಗೃಹಿಣಿ, ತಂದೆ ಟೈಸನ್ ಆ್ಯಪಲ್ ಕಂಪೆನಿಯಲ್ಲಿ ಸೇಲ್ಸ್ಮ್ಯಾನ್. ದಂಪತಿಗೆ 2020ರ ಜೂನ್ 23ರಂದು ಜನಿಸಿದ ಈ ಪುಟಾಣಿ ಸದ್ಯ ಸೇಂಟ್ ಬ್ರಿಗೇಡ್ ನರ್ಸರಿ ಶಾಲೆಯಲ್ಲಿ ಪ್ರಿಕೆಜಿ ಕಲಿಯುತ್ತಿದ್ದಾಳೆ. ಈ ಪುಟ್ಟ ಕಂದಮ್ಮನ ಸಾಧನೆಗೆ ತಂದೆ - ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲಕಿ ಸಾರಾ ರೋಮಿಯೋ (ETV Bharat) ತನ್ನ ಸೋದರತ್ತೆ ಮರಿಯಾ ಶೈನಿ ಅವರು ಮನೆಯಲ್ಲಿ ಸಂಜೆ ವೇಳೆ ಎಲ್‌ಕೆಜಿಯಿಂದ ಎಂಟನೆ ತರಗತಿವರೆಗಿನ ಮಕ್ಕಳಿಗೆ ಮನೆಪಾಠ ಮಾಡುತ್ತಾರೆ. ಈ ಸಮಯದಲ್ಲಿ ಆಟವಾಡುತ್ತಲೇ ಮನೆಪಾಠವನ್ನು ಆಲಿಸುತ್ತಿದ್ದ ಸಾರಾ ದೇಶದ ಎಲ್ಲ ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು ಕಂಠಪಾಠ ಮಾಡಿಕೊಂಡು ಸಾಧನೆ ಮಾಡಿದ್ದಾಳೆ.
ತಾಯಿ ಮಾಧುರಿ ಹೇಳಿದ್ದೇನು? "ನಮ್ಮ ಮಗುವಿನ ಬುದ್ಧಿಶಕ್ತಿ ದೇವರ ವರವೇ ಅನಿಸುತ್ತದೆ. ನನ್ನ ನಾದಿನಿ ಮನೆಯಲ್ಲಿ ಸಂಜೆ ವೇಳೆ ಶಾಲೆ ಮಕ್ಕಳಿಗೆ ಮನೆಪಾಠ ಮಾಡುತ್ತಾರೆ. ಆ ಸಮಯದಲ್ಲಿ ಅವರ ಬಳಿ ಇದನ್ನೆಲ್ಲ ಕಲಿತುಕೊಂಡು ಹೇಳುವ ಕೆಲಸ ಮಾಡಿದ್ದಾಳೆ. ನಾವು ಒತ್ತಾಯ ಮಾಡಿಲ್ಲ. ಆದರೂ ಅವಳೇ ಸ್ವಂತವಾಗಿ ಕಲಿತು ನಮ್ಮ ದೇಶದ ಎಲ್ಲಾ ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು ಹೇಳುತ್ತಾಳೆ. ಚಿಕ್ಕ ವಯಸ್ಸಿನಿಂದಲೂ ಸಾರಾ ತುಂಬಾ ಸಕ್ರಿಯವಾಗಿದ್ದಾಳೆ. ಶಾಲೆಯಲ್ಲೂ ಕೂಡಾ ಹಲವು ಬಹುಮಾನ ಬಂದಿದೆ. ನೃತ್ಯ, ಫ್ಯಾನ್ಸಿ ಡ್ರೆಸ್ಸಿಂಗ್ನಲ್ಲಿ ಬಹಳ ಆಸಕ್ತಿ ಇದೆ" ಎಂದು ತಿಳಿಸಿದರು.
ಬಾಲಕಿ ಸಾರಾ ರೋಮಿಯೋ (ETV Bharat) "ನಾನು ಯೂಟ್ಯೂಬ್ ನೋಡುತ್ತಿದ್ದಾಗ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಬಗ್ಗೆ ತಿಳಿಯಿತು. ಅದರಲ್ಲಿ ನಮ್ಮ ದೇಶದ ಎಲ್ಲ ರಾಜ್ಯ ಮತ್ತು ಅದರ ರಾಜಧಾನಿಗಳ ಹೆಸರನ್ನು ಹೇಳುವ ಸ್ಪರ್ಧೆ ಬಗ್ಗೆ ತಿಳಿದುಕೊಂಡೆ. ನಾನು ಇ-ಮೇಲ್ ಮೂಲಕ ಅವರನ್ನು ಸಂಪರ್ಕ ಮಾಡಿ, ನಮ್ಮ ಮಗುವಿನ ಬಗ್ಗೆ ಹೇಳಿದೆ. ನಂತರ ಜನವರಿ 7ರಂದು ಐಬಿಆರ್ ಇಮೇಲ್ ವಿಳಾಸಕ್ಕೆ ನಾವು ವಿಡಿಯೋ ತುಣುಕುಗಳನ್ನು ಕಳುಹಿಸಿದ್ದೆವು. ಬಳಿಕ ಜನವರಿ 14 ರಂದು ಐಬಿಆರ್ನಿಂದ ನಿಮ್ಮ ಮಗು ಆಯ್ಕೆಯಾಗಿದೆ ಎಂದು ಪ್ರಸಂಶನ ಸಂದೇಶವನ್ನು ಕಳುಹಿಸಿದರು. ಫೆಬ್ರವರಿ 4 ರಂದು ಗೂಗಲ್ನಲ್ಲಿ ರೆಕಾರ್ಡ್ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಲಾಗಿತ್ತು. ಈ ಆಯ್ಕೆಯಲ್ಲಿ ಅತಿ ಕಡಿಮೆ ವಯಸ್ಸಿನ ಹಲವು ವಿದ್ಯಾರ್ಥಿಗಳಲ್ಲಿ, ಅತಿ ಕಡಿಮೆ ಸಮಯಕ್ಕೆ, ಪ್ರಸ್ತುತಪಡಿಸಿರುವುದಾಗಿ ನಮ್ಮ ಮಗು ಸಾರಾಳನ್ನು ಆಯ್ಕೆ ಮಾಡಿದ್ದರು" ಸಂತಸ ವ್ಯಕ್ತಪಡಿಸಿದರು.
ಬಾಲಕಿ ಸಾರಾ ರೋಮಿಯೋ (ETV Bharat) "ಇದಲ್ಲದೆ ನರ್ಸರಿ ಶಾಲೆಯಲ್ಲಿ ಪ್ರವೇಶಾತಿಯನ್ನು ಪಡೆದಿದ್ದು, ಪ್ರಾರಂಭದಲ್ಲಿಯೇ ಪದ್ಯಗಳನ್ನು ಓದುವುದು, ಅಭಿನಯ ಮಾಡುವುದು, ನೃತ್ಯ ಮಾಡುವುದರಲ್ಲಿಯೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ನಮ್ಮ ಮಗಳ ಈ ಸಾಧನೆ ನಮಗೆ ಸಾಕಷ್ಟು ಖುಷಿ ತಂದಿದೆ. ಇವಳು ಮುಂದೆ ಸೇನೆಗೆ ಹೋಗಬೇಕು ಎಂದು ಹೇಳುತ್ತಾಳೆ. ಅಲ್ಲದೇ ನೃತ್ಯ ಮಾಡುವುದರಲ್ಲೂ ಮುಂದೆ ಇದ್ದಾಳೆ. ಅವಳ ಖುಷಿಯಂತೆ ನಾವು ಅವಳಿಗೆ ಜೀವನ ರೂಪಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ:ಪ್ರಿನ್ಸಿಟಾ ವಿಯನ್ನೆ ಡಿಸೋಜ 40.15 ನಿಮಿಷ ಯೋಗ ನಿದ್ರಾಸನ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ