ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆ (ETV Bharat) ಧಾರವಾಡ:"ರಾಜಕೀಯಕ್ಕೆ ಬರುವುದಿದ್ದರೆ ಸೇವೆಗಾಗಿ ಬನ್ನಿ, ನಿಮ್ಮ ಲಾಭಕ್ಕಾಗಿ ಅಲ್ಲ. ರಾಜಕೀಯ ವೃತ್ತಿ ಅಲ್ಲ. ಈ ಹಿಂದೆ ರಾಜಕೀಯ ಮಾಡಿದರವನ್ನು ಕಂಡಿದ್ದೇವೆ" ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ದೇಶ ಸೇವೆಗಾಗಿ ಹೋರಾಟ ಮಾಡಿ ರಾಜಕೀಯಕ್ಕೆ ಬಂದವರು ಯಾವುದೇ ವಿಚಾರದಲ್ಲಿ ತಮ್ಮ ಲಾಭಕ್ಕಾಗಿ ಕೆಲಸ ಮಾಡಿದ್ದಿಲ್ಲ. ಆದರೆ ಇವತ್ತು ರಾಜಕೀಯಕ್ಕೆ ಬರುವವರು ಬರೀ ತಮ್ಮ ಸ್ವಂತ ಲಾಭಕ್ಕಾಗಿ ಬರುತ್ತಿದ್ದಾರೆ" ಎಂದರು.
"ಎಲ್ಲ ಪಕ್ಷಗಳಲ್ಲೂ ದುರಾಸೆಯ ರೋಗವಿದೆ. ಅದಕ್ಕೆ ಒಂದು ಹೋರಾಟ ನಡೆಯಬೇಕು ಎಂಬುದು ನನ್ನ ವಿಚಾರ. ಯಾಕೆಂದರೆ ಈ ರೀತಿ ಭ್ರಷ್ಟಾಚಾರ ಮುಂದುವರೆದರೆ ನಮ್ಮ ಆರ್ಥಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಹೇಳುವುದು ಬಹಳ ಕಷ್ಟ. ಆರ್ಥಿಕ ಪರಿಸ್ಥಿತಿ ಕುಸಿಯುವುದರಿಂದ ಕಷ್ಟಪಡುವವರು ಮಧ್ಯಮ ಮತ್ತು ಕೆಳವರ್ಗದವರು. ಶ್ರೀಮಂತರಲ್ಲಿ ಹೇಗೂ ಹಣ ಇದ್ದೇ ಇರುತ್ತದೆ. ಅವರ ವಿಚಾರವನ್ನು ಅವರು ನೋಡಿಕೊಳ್ಳುತ್ತಾರೆ. ಮಧ್ಯಮ ಮತ್ತು ಕೆಳ ವರ್ಗದವರಿಗೆ ಇಂತಹ ಸಮಸ್ಯೆ ಬಂದರೆ ಮುಂದೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಇದರ ಪರಿಣಾಮ ಕ್ರಾಂತಿಯಾಗಬಹುದು. ಅದು ನಡೆಯದೇ ಇರಲು ಭ್ರಷ್ಟಾಚಾರವನ್ನು ತಡೆಗಟ್ಟುವ ಪ್ರಯತ್ನ ನಡೆಯಬೇಕು" ಎಂದು ತಿಳಿಸಿದರು.
"ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ ಅದು ಸಾರ್ವಜನಿಕ ಹಿತಾಸಕ್ತಿಗಲ್ಲ. ತಮ್ಮ ತಮ್ಮ ಅಭಿವೃದ್ಧಿಗಾಗಿ. ಹಿಂದೆ ಇದ್ದ ಸರ್ಕಾರವನ್ನು ಇಂದಿನ ಸರ್ಕಾರ 40% ಸರ್ಕಾರ ಎಂದು ಕರೆಯುತ್ತಿದ್ದರು. ಆದರೆ ಆರೋಪಿಸಿದ ಅದೇ ಸರ್ಕಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ನಾವಿಂದು ನೋಡುತ್ತಿದ್ದೇವೆ. ಆದ್ದರಿಂದ ಭ್ರಷ್ಟಾಚಾರ ಇಂದು ಒಂದು ರಾಜಕೀಯ ಪಕ್ಷಗಳಿಗೆ ಸೀಮಿತವಾದದ್ದಲ್ಲ. ಎಲ್ಲರೂ ಕೂಡ ಇವತ್ತು ರಾಜಕೀಯಕ್ಕೆ ಬರುವುದು ಶ್ರೀಮಂತರಾಗಲು ಮಾತ್ರ. ಯಾರು ಆದರ್ಶಪ್ರಿಯರಾಗಿದ್ದರೋ ಅವರಿಂದು ಜೈಲಿನಲ್ಲಿ ಇದ್ದಾರೆ. ಇದು ಯಾವ ಮಟ್ಟಕ್ಕೂ ಹೋದರೂ ದುರಾಸೆ ಕಡಿಮೆ ಆಗುವುದಿಲ್ಲ ಎಂಬುದನ್ನು ತೋರಿಸುತ್ತಿದೆ. ಹೀಗಾಗಿ ಸಮಾಜದಲ್ಲಿ ದೊಡ್ಡ ಬದಲಾವಣೆಯಾಗಬೇಕಿದೆ. ಆ ಬದಲಾವಣೆ ಮುಂದಿನ ಪೀಳಿಗೆಗೆ ಸರಿದಾರಿಯನ್ನು ತೋರಿಸಿ ಮತ್ತೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತಹ ಪ್ರಯತ್ನ ಮಾಡಬೇಕು" ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಮುನಿರತ್ನ ಕೇಸ್: ತನಿಖೆಯಾಗಿ ಸತ್ಯ ಹೊರಬರಲಿ, ಯಾರನ್ನೂ ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ-ಬಿಜೆಪಿ - Muniratna Case