ಬೆಂಗಳೂರು: ''ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿರುವುದು ತಡವಾಗಿರಬಹುದು. ಆದರೆ ತಡವಾಗಿ ಶಿಕ್ಷೆ ದೊರೆತಾಗ ಅದನ್ನು ಅನುಭವಿಸುವುದೂ ಸಹ ಅಷ್ಟೇ ಕಷ್ಟಕರವಾಗಿರುತ್ತದೆ'' ಎಂದು ಈ ಪ್ರಕರಣದ ತನಿಖೆ ಕೈಗೊಂಡಿದ್ದ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಅವರು, ''ಸಮಾಜದಲ್ಲಿ ಜನಸಾಮಾನ್ಯರೇ ಆಗಲಿ, ಜನನಾಯಕರೇ ಆಗಲಿ, ಕಾನೂನು ಎಲ್ಲರಿಗೂ ಒಂದೇ ಆಗಿದೆ. ಈ ಪ್ರಕರಣದ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವಂತದ್ದು. ಮತ್ತು ಈ ತೀರ್ಪಿನ ಕುರಿತು ಸಂತಸವಿದೆ. ಮುಂದಿನ ದಿನಗಳಲ್ಲಿಯೂ ಸಹ ಯಾರೇ ತಪ್ಪಿತಸ್ಥರಾಗಿದ್ದರೂ, ಸಹ ಕಾನೂನಿನ ಅನ್ವಯ ಶಿಕ್ಷಾರ್ಹರಾಗಿರುತ್ತಾರೆ ಎಂಬುದನ್ನು ಮೊದಲೇ ಅರಿತಿರಬೇಕಾಗುತ್ತದೆ'' ಎಂದು ತಿಳಿಸಿದರು.
2009-10ರಲ್ಲಿ ನಡೆದಿದ್ದ ಪ್ರಕರಣವನ್ನು ಅಕ್ರಮ ಗಣಿಗಾರಿಕೆ ತನಿಖೆಯ ವೇಳೆ ಬೆಳಕಿಗೆ ತಂದಿದ್ದ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸಮಗ್ರ ತನಿಖೆ ನಡೆಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು ಏನು?:ಪ್ರಕರಣ ಸಂಬಂಧ ಶನಿವಾರ (ಅ.26) ತೀರ್ಪು ಪ್ರಕಟಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರರಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.