ಕರ್ನಾಟಕ

karnataka

ETV Bharat / state

ಡಿಸೆಂಬರ್ ಅಂತ್ಯದೊಳಗೆ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಉದ್ಘಾಟನೆ: ಸಚಿವ ಶಿವರಾಜ ತಂಗಡಗಿ

ಇಂದಿನ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಜೊತೆಗೆ ನಂದಗಡದ ಕೆರೆಯಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

Sangolli Rayanna Museum to be inaugurated by the end of December: Minister Shivaraj Tangadagi
ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಪರಿಶೀಲನೆ (ETV Bharat)

By ETV Bharat Karnataka Team

Published : 4 hours ago

ಬೆಳಗಾವಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಳೆದ 3 - 4 ವರ್ಷಗಳಿಂದ ಮ್ಯೂಸಿಯಂ ಕಾಮಗಾರಿ ಪ್ರಗತಿಯಲ್ಲಿದ್ದು, ಚಳಿಗಾಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸಂಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮ್ಯೂಸಿಯಂ ಲೋಕಾರ್ಪಣೆಗೆ ಸಿದ್ಧಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.

ಖಾನಾಪುರ ತಾಲೂಕಿನ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯದಲ್ಲಿ ಮಂಗಳವಾರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ನಂದಗಡ ಮ್ಯೂಸಿಯಂ ಸೇರಿ ಒಟ್ಟು 261 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 59 ಕೋಟಿ ವೆಚ್ಚದಲ್ಲಿ ಒಟ್ಟು 13 ಎಕರೆ ಜಾಗೆಯಲ್ಲಿ ನಂದಗಡ ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಪರಿಶೀಲನೆ (ETV Bharat)

ಪ್ರಗತಿಯಲ್ಲಿ ವಿವಿಧ ಕಾಮಗಾರಿಗಳು:ನಂದಗಡ ಮ್ಯೂಸಿಯಂ ವಿವಿಧ ಕಾಮಗಾರಿಗಳ ಪ್ರಗತಿಯಲ್ಲಿದ್ದು, ಯಾವುದೇ ರೀತಿಯ ಕಾಮಗಾರಿಗಳು ಬಾಕಿ ಉಳಿಯಬಾರದು. ಮುಂದಿನ ಒಂದು ವಾರದೊಳಗೆ ಕಂಪೌಂಡ, ರಸ್ತೆ, ಕಲಾಕೃತಿಗಳು ಸೇರಿದಂತೆ ಅಗತ್ಯ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಿನಿಮಾ ಆ್ಯನಿಮೇಟರ್ ವಿದ್ಯುನ್ಮಾನ ತಂತ್ರಜ್ಞಾನ ಅಳವಡಿಸಲು ಕೆಲವು ಕಾಮಗಾರಿಗಳು ಬಾಕಿ ಇವೆ. ಅವುಗಳನ್ನು ಕೂಡಲೇ ಪ್ರಾರಂಭಿಸಬೇಕು. ಸರ್ಕಾರದಿಂದ ಗುತ್ತಿಗೆದಾರರ ಬಿಲ್ ಬಾಕಿ ಉಳಿಯದಂತೆ ನೋಡಿಕೊಳ್ಳಗುವುದು. ಗುತ್ತಿಗೆದಾರರು ಆತಂಕ ಪಡದೆ ಡಿಸೆಂಬರ್ 9ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಶಿವರಾಜ ತಂಗಡಗಿ ಸೂಚಿಸಿದರು.

ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಪರಿಶೀಲನೆ (ETV Bharat)

ಸಂಗೊಳ್ಳಿ ರಾಯಣ್ಣ ಅಧ್ಯಯನ ಕೇಂದ್ರ, ಗ್ರಂಥಾಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಡಿಸೆಂಬರ್ 9 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಡಿಸೆಂಬರ್ ಅಂತ್ಯದೊಳಗೆ ಮ್ಯೂಸಿಯಂ ಉದ್ಘಾಟನೆ ಮಾಡಲಾಗುವುದು ಎಂದು ಸಚಿವ ತಂಗಡಗಿ ಹೇಳಿದರು.

ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಪರಿಶೀಲನೆ (ETV Bharat)

ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಪ್ರಯತ್ನ: ಇಂದಿನ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಮ್ಯೂಸಿಯಂ ಜೊತೆಗೆ ನಂದಗಡದ ಕೆರೆಯಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗುವುದು. ನಂದಗಡದ ರಾಯಣ್ಣ ಸಮಾಧಿಯಿಂದ ಮ್ಯೂಸಿಯಂವರೆಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಸಧ್ಯದಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಜನರಿಗೆ ಅನುಕೂಲವಾಗುವ ಪ್ರವೇಶ ದರ ನಿಗದಿ ಪಡಿಸಿ ಜಿಲ್ಲೆಯಲ್ಲಿ ಅತ್ಯುತ್ತಮ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಉನ್ನತ ಮಾದರಿ ಮ್ಯೂಸಿಯಂ ನಿರ್ಮಾಣಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಪರಿಶೀಲನೆ (ETV Bharat)

ಸಭೆಯ ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳ ಮತ್ತು ರಾಯಣ್ಣ ಕೆರೆಯಲ್ಲಿ ಪ್ರತಿಮೆ ಸ್ಥಾಪನೆ ಸ್ಥಳ, ಮ್ಯೂಸಿಯಂ ವೀರಭೂಮಿ, ವಸ್ತು ಸಂಗ್ರಹಾಲಯ, ಮ್ಯೂಸಿಯಂ ಮುಖ್ಯ ದ್ವಾರ, ಸಂಗೊಳ್ಳಿ ರಾಯಣ್ಣ ಸ್ಮರಣೀಯ ಪ್ರತಿಮೆಗಳು, ಸಾರ್ವಜನಿಕ ಪ್ರವೇಶದ ಟಿಕೆಟ್ ಕೌಂಟರ್, ಅಲ್ಪೋಪಹಾರ ಗೃಹ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಕಂಪೌಂಡ, ದೀಪಾಲಂಕಾರ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಪರಿಶೀಲನೆ (ETV Bharat)

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶ್ ಕುಮಾರ ಮೀನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹರ್ಷ, ತಹಶೀಲ್ದಾರ ಪ್ರಕಾಶ ಗಾಯಕವಾಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಪರಿಶೀಲನೆ (ETV Bharat)

ಇದನ್ನೂ ಓದಿ: ರಾಣಿ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details