ಬೆಂಗಳೂರು: ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡವೊಂದರ ಬಳಿ ಮೇ 9ರಂದು ಅನುಮಾನಸ್ಪಾದವಾಗಿ ಯುವಕನ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಂಜಿತ್ ಪ್ರಧಾನ್ ಹಾಗೂ ರಮೇಶ್ ಎಂದು ಗುರುತಿಸಲಾಗಿದೆ.
ಒಡಿಶಾ ಮೂಲದ ಈ ಇಬ್ಬರು ಕಳೆದ ಒಂದು ವರ್ಷದಿಂದ ಗಾರೆ ಕೆಲಸ ಮಾಡುತ್ತಿದ್ದರು. ಮಿಷನ್ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಮೇ 9ರಂದು ಸತ್ಯ ಎಂಬಾತ ಅಲ್ಲಿಗೆ ಬಂದಿದ್ದಾನೆ. ಅಪರಿಚಿತ ವ್ಯಕ್ತಿ ಬಂದಿರುವುದನ್ನು ನೋಡಿ ಆರೋಪಿಗಳು ಪ್ರಶ್ನಿಸಿದ್ದರು.
ಈ ನಡುವೆ ಮಾತಿನ ಚಕಮಕಿ, ತಳ್ಳಾಟವಾಗಿ ಸತ್ಯನನ್ನು ನೂಕಿದ್ದಾರೆ. ಆಗ ತುಂಡಾಗಿ ಬಿದ್ದಿದ್ದ ವೈರ್ ತಾಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇದರಿಂದ ಆತಂಕಗೊಂಡ ಆರೋಪಿಗಳು ಶವವನ್ನು ಪಕ್ಕದ ಕಟ್ಟಡಕ್ಕೆ ಶಿಫ್ಟ್ ಮಾಡಿ ಸುಮ್ಮನಾಗಿದ್ದರು. ಮೇ 10ರಂದು ಶವ ಪತ್ತೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.