ಬೀದರ್:ಯುವಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ನಗರಕ್ಕೆ ಆಗಮಿಸಿದ್ದು, ತನಿಖೆಯನ್ನು ಆರಂಭಿಸಿದೆ.
ಬೆಂಗಳೂರಿನಿಂದ ಬೀದರ್ಗೆ ಆಗಮಿಸಿದ ಡಿವೈಎಸ್ಪಿ ಸುಲೇಮಾನ್ ತಹಶೀಲ್ದಾರ್ ಅವರ ನೇತೃತ್ವದ ತನಿಖಾ ತಂಡ, ನಗರದ ಎಸ್ಪಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ ಅವರು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು.
ಎಸ್ಪಿ ಪ್ರದೀಪ್ ಅವರಿಂದ ಕೇಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳ ತಂಡ, ನೇರವಾಗಿ ರೈಲ್ವೆ ಪೊಲೀಸ್ ಠಾಣೆಗೆ ಆಗಮಿಸಿ ಅಲ್ಲಿಯ ಸಿಪಿಐ ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಬಂದು ಸಚಿನ್ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು. ನಂತರ ರೈಲ್ವೆ ಪೊಲೀಸ್ ಠಾಣೆಗೆ ಆಗಮಿಸಿದ ಸಿಐಡಿ ತಂಡ, ಸುದೀರ್ಘ ಎರಡು ಗಂಟೆಗಳ ಕಾಲ ರೈಲ್ವೆ ಪೊಲೀಸರಿಂದಲೂ ಮಾಹಿತಿ ಕಲೆಹಾಕಿತು.
ರೈಲ್ವೆ ಠಾಣೆಯಿಂದ ಮಾಹಿತಿ ಪಡೆದು ಬಳಿಕ ನೇರವಾಗಿ ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ್ ಗ್ರಾಮದ ಮೃತ ಸಚಿನ್ ಮನೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳು ಅಲ್ಲಿಯೂ ಸುದೀರ್ಘ ಎರಡು ಗಂಟೆಗೂ ಹೆಚ್ಚು ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ ಮಾಡಿದರು.
ಈ ವೇಳೆ ಮೃತ ಸಚಿನ್ ಸಹೋದರಿ ಸುರೇಖಾ ಮಾತನಾಡಿ, ''ನಮಗೆ ಸಿಐಡಿ ತಂಡದಿಂದ ನ್ಯಾಯ ಸಿಗುವ ಭರವಸೆ ಇದೆ. ನ್ಯಾಯ ಸಿಗದಿದ್ದರೆ ಹೋರಾಟ ಅನಿವಾರ್ಯ'' ಎಂದು ತಮ್ಮ ಅಳಲು ತೋಡಿಕೊಂಡರು. ಈ ವೇಳೆ ಅಧಿಕಾರಿಗಳು ಸುರೇಖಾ ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡರು.
ಪ್ರಕರಣ ಸಂಬಂಧ ಕೆಲವು ದಾಖಲೆ ಪಡೆದ ಸಿಐಡಿ ಟೀಂ, ಇಂದು (ಶನಿವಾರ) ಕೂಡ ತನಿಖೆ ಮುಂದುವರೆಸಲಿದೆ ಎಂಬ ಮಾಹಿತಿ ಇದೆ. ಇಂದು ಸಂಜೆ ಕಲಬುರಗಿ ಜಿಲ್ಲೆಗೆ ಭೇಟಿ ನೀಡಲಿದ್ದು, ಸಚಿನ್ ಕೆಲಸ ಮಾಡಿದ್ದ ಕಚೇರಿ ಸಿಬ್ಬಂದಿಗಳ ವಿಚಾರಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಐಡಿ ಅಧಿಕಾರಿಗಳು ನಮ್ಮ ಎಲ್ಲಾ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಹೇಳಿಕೆಗಳನ್ನು ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾರೆ. ನಿಮಗೆ ನ್ಯಾಯ ಸಿಗುತ್ತದೆ ಅಂತಲೂ ಅಧಿಕಾರಿಗಳು ಮಾತು ಕೊಟ್ಟಿದ್ದಾರೆ. ಹಾಗಾಗಿ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಸುರೇಖಾ - ಮೃತ ಸಚಿನ್ ಸಹೋದರಿ