ಯಲಹಂಕ (ಬೆಂಗಳೂರು) :ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಕೆ ಸುಧಾಕರ್ ವಿರುದ್ಧ ಎಸ್. ಆರ್ ವಿಶ್ವನಾಥ್ ತಟಸ್ಥರಾಗಿದ್ದಾರೆ. ಅವರ ಜೊತೆ ಪ್ರಚಾರ ಮಾಡುವುದಿಲ್ಲ. ವೇದಿಕೆ ಸಹ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಎಸ್. ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಟಿಕೆಟ್ ಕೈತಪ್ಪಿ ಡಾ. ಕೆ ಸುಧಾಕರ್ ಅವರಿಗೆ ಸಿಕ್ಕಿರುವುದು ವಿಶ್ವನಾಥ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಯಲಹಂಕದಲ್ಲಿ ಇಂದು ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸಭೆ ನಡೆಸಿದ ಎಸ್. ಆರ್ ವಿಶ್ವನಾಥ್, ಡಾ. ಕೆ ಸುಧಾಕರ್ ಪರವಾಗಿ ಪ್ರಚಾರ ಮಾಡುವುದಿಲ್ಲ. ಮೋದಿ ಪರವಾಗಿ ಮತ್ತು ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಧಾಕರ್ ಪರವಾಗಿ ನಾವು ಮತ ಕೇಳುವುದಿಲ್ಲ. ಪಕ್ಷದ ಪರವಾಗಿ, ಮೋದಿ ಪರವಾಗಿ ಮತ ಕೇಳುತ್ತೇವೆ. ಇದು ನಮ್ಮ ವೈಯಕ್ತಿಕ ನಿಲುವು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡುವೆ. ಬೂತ್ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದರು.
ಸೋಲು ಗೆಲುವು ಆ ಭಗವಂತನಿಗೆ ಬಿಟ್ಟಿದ್ದು, ಮತದಾರರು ವ್ಯಕ್ತಿಯನ್ನು ನೋಡಿ ಮತ ಹಾಕುತ್ತಾರೆ. ಸೋತರೆ ನಾವು ಜವಾಬ್ದಾರರಲ್ಲ. ಎಂಪಿ ಸೀಟ್ ಸಿಗದೆ ಇದ್ದಿದ್ದಕ್ಕೆ ಬೇಸರವಿಲ್ಲ. 45 ವರ್ಷ ರಾಜಕೀಯ ಮಾಡಿದ ನನಗೆ ರಾಜಕೀಯ ಹಪಾಹಪಿ ಇಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ನಾನು ಮಾಡುವುದಿಲ್ಲ. ಕುಟುಂಬ ರಾಜಕೀಯ ಎಂಬ ಕಾರಣಕ್ಕೆ ನಮಗೆ ಟಿಕೆಟ್ ಕೈತಪ್ಪಿದೆ ಎಂದು ತಿಳಿಸಿದರು.