ಬೆಂಗಳೂರು: ಎಸ್.ಎಂ. ಕೃಷ್ಣ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ನಡೆದ ವರನಟ ಡಾ.ರಾಜ್‌ಕುಮಾರ್ ಅಪಹರಣ, ಕಾಡುಗಳ್ಳ ವೀರಪ್ಪನ್ನಿಂದ ಅವರನ್ನು ಬಿಡುಗಡೆ ಮಾಡಿಸಿದ್ದೇ ರೋಚಕ. ಕಾಡುಗಳ್ಳ ವೀರಪ್ಪನ್, ಡಾ. ರಾಜ್‌ಕುಮಾರ್ ಸೇರಿದಂತೆ ಮೂವರನ್ನು ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ಗಾಜನೂರಿನ ಅವರ ತೋಟದ ಮನೆಯಿಂದ ಅಪಹರಿಸಿದ ಕರಾಳ ಘಟನೆ 2000 ಇಸವಿಯ ಜುಲೈ 30 ರಂದು ನಡೆದಿತ್ತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎಸ್.ಎಂ. ಕೃಷ್ಣ ಅವರು.
ಖ್ಯಾತರಾಗಿರುವವರನ್ನು ಅಪಹರಿಸಿದರೆ ಹಣ ಸಿಗುತ್ತದೆಂದು ತಿಳಿದ ವೀರಪ್ಪನ್, ವರನಟ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸುವ ಸಂಚು ಮಾಡಿದ್ದ. ತನ್ನ ಮಾಹಿತಿದಾರರಿಂದ ರಾಜ್‌ಕುಮಾರ್ ಅವರು ಗಾಜನೂರಿಗೆ ಬರುವ ವಿಷಯ ತಿಳಿದು 2000ರ ಜುಲೈ 30ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ರಾಜ್‌ಕುಮಾರ್ ಅವರನ್ನು ಹಾಗೂ ಇನ್ನಿತರ ಮೂವರನ್ನು ಅಪಹರಿಸಿ ಕರೆದೊಯ್ದಿದ್ದ. ಅವರನ್ನು ಸತ್ಯಮಂಗಲ ಕಾಡಿನಲ್ಲಿ 108 ದಿನಗಳ ಕಾಲ ಒತ್ತೆಯಾಗಿರಿಸಿಕೊಂಡಿದ್ದ.
ಅಪಹರಿಸಿದ್ದೇಗೆ? ಖಾಕಿ ಹಾಗೂ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದ ವೀರಪ್ಪನ್ ತಂಡದ ನಾಲ್ವರು ಫಾರ್ಮ್ ಹೌಸ್‌ನ ಮುಂಬಾಗಿಲು ತಟ್ಟಿದ್ದರು. ಬಾಗಿಲು ಪೂರ್ತಿ ತೆರೆಯುವಷ್ಟರಲ್ಲಿಯೇ ಬಲವಂತವಾಗಿ ಅವರು ಬಾಗಿಲನ್ನು ನೂಕಿಕೊಂಡು ಒಳಕ್ಕೆ ನುಗ್ಗಿದ್ದರು. ಎರಡು ನಿಮಿಷಗಳ ನಂತರ ವೀರಪ್ಪನ್ ಸಹ ಆ ಮನೆಯ ಒಳಗೆ ಪ್ರವೇಶಿದ್ದ. ಆತನನ್ನು ನೋಡಿದ ಕೂಡಲೇ ಮನೆಯೊಳಗಿದ್ದವರು ಗಾಬರಿಗೊಂಡಿದ್ದರು. ಆಗ ಕುಳಿತಿದ್ದ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಉದ್ದೇಶಿಸಿ, "ಅಯ್ಯಾ, ಬನ್ನಿ ಹೋಗೋಣ" ಎಂದ. ರಾಜ್‌ಕುಮಾರ್ ಮೇಲೆದ್ದ ಕೂಡಲೇ ತನ್ನ ಬಳಿಯಿದ್ದ ಒಂದು ಆಡಿಯೋ ಕ್ಯಾಸೆಟನ್ನು ಅಲ್ಲೇ ಇದ್ದ ಪಾರ್ವತಮ್ಮನವರಿಗೆ ಕೊಟ್ಟು, "ಇದನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣರ ಕೈಗೆ ಕೊಡಿ. ನನಗೇನು ಬೇಕೋ ಅದು ಅವರಿಗೆ ತಿಳಿಯುತ್ತದೆ. ನಾನು ಅಯ್ಯನವರಿಗೆ ಏನೂ ಹಾನಿ ಮಾಡುವುದಿಲ್ಲ ಚಿಂತಿಸಬೇಡಿ" ಎಂದಿದ್ದನಂತೆ. ರಾಜ್‌ಕುಮಾರ್ ಜೊತೆ ಅವರ ಅಳಿಯ ಗೋವಿಂದರಾಜ್, ಸಂಬಂಧಿಕ ನಾಗೇಶ್ ಹಾಗೂ ಸಹಾಯಕ ನಾಗಪ್ಪ ಮಾರಡಗಿ ಅವರನ್ನು ಕರೆದೊಯ್ದಿದ್ದ. ವೀರಪ್ಪನ್ ಯೋಚಿಸಿದ್ದಕ್ಕಿಂತ ಉತ್ತಮವಾಗಿ ನಡೆದ ಈ ಕಾರ್ಯಾಚರಣೆ ಮುಂದಿನ 108 ದಿನಗಳ ಕಾಲ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಿದ್ದೆಗೆಡಿಸಿ ಇಡೀ ವಿಶ್ವದ ಗಮನ ಸೆಳೆದಿತ್ತು.
ಡಾ.ರಾಜ್‌ಕುಮಾರ್ ಅವರನ್ನು ಅಪಹರಣ ಮಾಡಿದ್ದ ವೀರಪ್ಪನ್ ಅಂದಿನ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದ. ಅದರಲ್ಲಿ ಹಣವೂ ಸೇರಿತ್ತು. ಆದರೆ, ಈ ಕುರಿತು ಎಲ್ಲಿಯೂ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬರೆದಿರುವ 'ಸ್ಮೃತಿವಾಹಿನಿ' ಎಂಬ ಆತ್ಮಕಥೆಯಲ್ಲಿ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ.
"ದಿನನಿತ್ಯದಂತೆ ವಿಧಾನಸೌಧದಿಂದ ಮನೆಗೆ ಬಂದೆ. ಸಂಜೆ 7.30, ಕಾಫಿ ಕುಡಿಯುತ್ತಿದ್ದೆ. ಪಾರ್ವತಮ್ಮ ರಾಜ್‌ಕುಮಾರ್ ಮಾತನಾಡುತ್ತಾರೆ ಎನ್ನುತ್ತಾ ಪಿ.ಎ. ಫೋನ್ ಕೊಟ್ಟ. ಪಾರ್ವತಮ್ಮ, 'ಅಣ್ಣಾ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ' ಎಂದರು. ಗಾಬರಿಯಾಗಿ 'ಏನು ಹೇಳುತ್ತಿದ್ದೀರಮ್ಮಾ' ಅಂದೆ. ನನಗೆ ಒಮ್ಮೆಲೆ ಆಕಾಶ ಕಳಚಿ ಬಿದ್ದಂತಾಗಿ ಆತಂಕ ಶುರುವಾಯಿತು. ಪರಿಸ್ಥಿತಿ ಏನಾಗುತ್ತದೋ ಅಂತ ಮನಸ್ಸಿನಲ್ಲಿಯೇ ಲೆಕ್ಕ ಹಾಕಿದೆ. ನನ್ನ ಅಳಿಯ ಸಿದ್ಧಾರ್ಥನನ್ನು ಕರೆಸಿದೆ. ಅವನ ಸೋದರ ಸಂಬಂಧಿ ಸೇನಾನಿ ಹಾಗೂ ಕೃಪಾಕರ ಅವರಿಬ್ಬರೂ ಜೆ.ಹೆಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಒಂದಷ್ಟು ದಿವಸ ವೀರಪ್ಪನ್ ಸೆರೆಯಲ್ಲಿದ್ದರು. ಇಬ್ಬರೂ ವನ್ಯಜೀವಿ ಛಾಯಾಗ್ರಾಹಕರು. ಅವರಿಗೆ ವೀರಪ್ಪನ್ ಜೊತೆ ಮಾತನಾಡುವಷ್ಟು ಸಂಪರ್ಕವಿರಬಹುದು ಎಂಬುದು ನನ್ನ ವಿಚಾರವಾಗಿತ್ತು. ಅಷ್ಟೊತ್ತಿಗೆ ಇಂಟೆಲಿಜೆನ್ಸ್‌ನ ಮುಖ್ಯಸ್ಥರು, ಡಿ.ಜಿ, ಗೃಹಮಂತ್ರಿ ಹಾಗೂ ಗೃಹ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಎಲ್ಲಾ ಬಂದರು. ಪಾರ್ವತಮ್ಮ ರಾಜ್‌ಕುಮಾರ್ ಕೂಡ ಬಂದರು. ಆಗ ರಾತ್ರಿ 1 ಗಂಟೆಯಾಗಿತ್ತು."
"ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕರುಣಾನಿಧಿಯವರಿಗೆ ಫೋನ್ ಮಾಡಿದೆ. ಅವರು 'ಏನು ಮಾಡುವುದು' ಅಂತ ಕೇಳಿದರು. ನೀವೇನಾದರೂ ಮಾಡಲೇಬೇಕು, ನಾಳೆ ಬರುತ್ತೇನೆ ಅಂತ ಹೇಳಿದೆ. ಮಾರನೆ ದಿನ ಚೆನ್ನೈಗೆ ಹೋಗಿ ಕರುಣಾನಿಧಿ ಅವರನ್ನು ಭೇಟಿ ಮಾಡಿದೆ. ಅವರು ಯೋಚನೆ ಮಾಡಿ, 'ಯಾರಾದರೂ ಒಬ್ಬರನ್ನು ವೀರಪ್ಪನ್‌ನ ಹತ್ತಿರ ಕಳುಹಿಸಬೇಕು' ಎಂದರು. 'ನಕ್ಕೀರನ್ ಗೋಪಾಲ್ ಅಂತ ಪತ್ರಕರ್ತರಿದ್ದಾರೆ. ಅವರು ಆಗಾಗ್ಗೆ ವೀರಪ್ಪನ್ ಭೇಟಿ ಮಾಡಿ ಅವನಿಗೆ ಸಂಬಂಧಪಟ್ಟಂತೆ ಸುದ್ದಿ ಕೂಡ ಪ್ರಕಟಿಸುತ್ತಾರೆ' ಎಂದರು. ಆಗ ನಕ್ಕೀರನ್‌ರನ್ನು ಕರೆಸಿದೆವು. ಪ್ರಾರಂಭದಲ್ಲಿ ಅವರು ಕಾಡಿಗೆ ಹೋಗಿ ವೀರಪ್ಪನ್ ನೋಡಲಿಕ್ಕೆ ಅಂಥ ಉತ್ಸಾಹವೇನೂ ತೋರಿಸಲಿಲ್ಲ. ನಾನೇ ಅವರಿಗೆ ಪ್ರಾರ್ಥಿಸಿ, ಏನಾದರೂ ಮಾಡಿ ವೀರಪ್ಪನ್ ಸಂಪರ್ಕ ಮಾಡಪ್ಪ ಅಂತ ಕೇಳಿಕೊಂಡು ಸಂಜೆ ಬೆಂಗಳೂರಿಗೆ ಬಂದೆ".