ಕರ್ನಾಟಕ

karnataka

ETV Bharat / state

ವಿಪಕ್ಷ ಬಿಜೆಪಿ ಸಭಾತ್ಯಾಗದ ಮಧ್ಯೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ಅಂಗೀಕಾರ - PANCHAYAT RAJ VV AMENDMENT BILL

ವಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕವಿಂದು ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

assembly
ವಿಧಾನಸಭೆ (ETV Bharat)

By ETV Bharat Karnataka Team

Published : Dec 17, 2024, 7:34 PM IST

ಬೆಳಗಾವಿ :ವಿಪಕ್ಷ ಬಿಜೆಪಿ ಸಭಾತ್ಯಾಗದ ಮಧ್ಯೆ ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕೃತವಾಯಿತು.

ವಿಧಾನಸಭೆಯಲ್ಲಿ 2024 ನೇ ಸಾಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ ವಿಪಕ್ಷಗಳ ವಿರೋಧದ ಮಧ್ಯೆ ಅಂಗೀಕಾರವಾಯಿತು. ಈ ವಿಧೇಯಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.

ಪ್ರಸ್ತುತ ವಿವಿಯಲ್ಲಿ ರಾಜ್ಯಪಾಲರು ಕುಲಾಧಿಪತಿ ಆಗಿದ್ದರು. ಈ ವಿಧೇಯಕದಂತೆ ರಾಜ್ಯಪಾಲರ ಬದಲು ವಿವಿಗೆ ಸಿಎಂ ಕುಲಾಧಿಪತಿಗಳಾಗಲಿದ್ದಾರೆ. ಈ ವಿಶ್ವವಿದ್ಯಾಲಯದ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಸಿಎಂಗೆ ಇರಲಿದೆ. ಆ ಮೂಲಕ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.

ಇದರ ಜೊತೆಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ಇದರನ್ವಯ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕಾಗಿರುತ್ತದೆ. ಈ ನಿಯಮಗಳನ್ನು ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಕೆಲವೊಂದು ಪ್ರಕರಣಗಳಿಗೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ.

ಗ್ರಾಮೀಣ ಮಟ್ಟದಲ್ಲಿ ಹೊಸ ಹೊಸ ಆವಿಷ್ಕಾರ ಆಗಬೇಕು. ಉದ್ಯೋಗಗಳು ಹೆಚ್ಚಾಗಬೇಕು ಎಂಬ ಕಾರಣಕ್ಕೆ ಈ ವಿಧೇಯಕ ತರಲಾಗಿದೆ.‌ ಇದರಲ್ಲಿ ಯಾವುದೇ ಅನ್ಯ ಉದ್ದೇಶ ಇಲ್ಲ. ಯಾವುದೇ ರಾಜಕೀಯ ಇಲ್ಲ. ಸದುದ್ದೇಶದಿಂದ ಈ ಮಸೂದೆ ತರಲಾಗುತ್ತಿದೆ. ಗುಜರಾತ್​ನಲ್ಲೂ ಸಿಎಂರನ್ನೇ ವಿವಿಗಳ ಕುಲಾಧಿಪತಿಯನ್ನಾಗಿ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.‌

ಇತ್ತ ವಿಪಕ್ಷ ಬಿಜೆಪಿ ಸದಸ್ಯರು ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಅಶ್ವತ್ಥ್​ ನಾರಾಯಣ್, ಈ ಮಸೂದೆಯಲ್ಲಿ ಯಾವ ಸದುದ್ದೇಶವೂ ಇಲ್ಲ. ಯಾವ ಸುಧಾರಣೆಯೂ ಕಾಣ್ತಿಲ್ಲ. ಗುಣಮಟ್ಟ ಹೆಚ್ಚಿಸುವ ಬಿಲ್ ಅಂತ ಹೇಳ್ತಾರೆ. ವಿವಿಗಳಿಗೆ ಸ್ವಾಯತ್ತತ್ತೆ ಕೊಡುವುದು ಸರಿಯಲ್ಲ. ಮತ್ತಷ್ಟು ಬಿಗಿಯಾದ ಹಿಡಿತ ಇರಬೇಕು. ಕುಲಪತಿಗಳೇ ಎಲ್ಲವನ್ನು ಮಾಡಬೇಕೆಂಬುದು ಸರಿಯಲ್ಲ. ವಿವಿಗಳಿಂದ ಒಳ್ಳೆ ಪ್ರತಿಭೆಗಳು ಬೇಕಾ?. ಸಣ್ಣ ಮಟ್ಟದ ಆಲೋಚನೆ ಇಲ್ಲಿ ಮಾಡಬೇಡಿ. ರಾಜ್ಯದ ಜನರ ಭವಿಷ್ಯ ಇದರಲ್ಲಿದೆ. ಈ ಬಿಲ್ ವಾಪಸ್ ಪಡೆಯಿರಿ. ಪ್ರತಿಪಕ್ಷಗಳ ಸಲಹೆಗಳನ್ನೂ‌ ಪಡೆಯಿರಿ. ಸರ್ಕಾರ ಪ್ರೊಗ್ರೆಸ್ಸಿವ್ ಆಗಿರಬೇಕು. ಚಾನ್ಸಲರ್ ಸ್ಥಾನದಿಂದ ಗೌರ್ನರ್ ತೆಗೆಯೋದು ಬೇಡ. ನಿಮ್ಮ‌ ಹಗೆತನ, ವೈಮನಸ್ಸು ಯಾವುದೂ ಬೇಡ. ಪ್ರಿಯಾಂಕ್ ಖರ್ಗೆಯವರು ನೀವು ಬೆಳೆಯುವವರು. ಹಾಗಾಗಿ ಹಗೆತನ, ದ್ವೇಷ ಬೇಡ. ಹೋಗಿ ಎಲ್ಲೋ ಡಿಕ್ಕಿ ಹೊಡೆದುಕೊಳ್ಳೋದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಸೂದೆಗೆ ಆಕ್ಷೇಪಿಸಿದ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ, ಹೆಚ್. ಕೆ ಪಾಟೀಲರ ಕನಸಿನ‌ ಕೂಸು ಅದು. ರಾಜ್ಯಪಾಲರ ಪೀಠ ಸಂವಿದಾನದತ್ತವಾದುದು. ಇದನ್ನು ಯಾಕೆ ಧಿಕ್ಕರಿಸುತ್ತಿದ್ದೀರಿ?. ಎಲ್ಲಾ ವಿವಿಗಳಿಗೆ ರಾಜ್ಯಪಾಲರೇ ಉಪಕುಲಪತಿಗಳು. ಕೇರಳದಲ್ಲೂ ಇದೇ ರೀತಿ‌ ಮಾಡೋಕೆ‌ ಹೊರಟ್ರು. ಆದರೆ ನಮ್ಮ ರಾಜ್ಯದಲ್ಲಿ ಇದು ಬೇಡ ಅನ್ನಿಸುತ್ತದೆ. ರಾಜ್ಯಪಾಲರನ್ನು ತೆಗೆದು ಸಿಎಂಗೆ ಕೊಡೋದು ಸರಿಯಲ್ಲ. ಇದನ್ನು ನಾನು ವಿರೋಧಿಸುತ್ತೇನೆ ಎಂದರು.

ಹಾಗಾದರೆ ಗುಜರಾತ್ ಮಾಡೆಲ್ ಒಪ್ಪಿಕೊಳ್ಳಿ:ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರ ಗೌವರ್ನರ್​​ ಮಧ್ಯೆ ಕಂದಕ ತರುತ್ತಿದೆ. ರಾಜ್ಯಪಾಲರು ಕುಲಾಧಿಪತಿ ಆಗಿರುವುದರಿಂದ ಸಮಸ್ಯೆಗಳು ಏನಿದೆ ಅನ್ನೋದನ್ನು ಹೇಳಬೇಕಿತ್ತು. ಆದರೆ ತೆಗೆಯೋಕೆ ಏನಿದೆ ಹೇಳ್ತಿಲ್ಲ. ಗುಜರಾತ್​ನಲ್ಲೂ ಇದೇ ಮಾದರಿ ಸಿಎಂಗೆ ಅಧಿಕಾರ ನೀಡಲಾಗಿದೆ ಅಂತೀರಿ. ಹಾಗಾದ್ರೆ ಗುಜರಾತ್‌ ಮಾದರಿ ಒಪ್ಪಿಕೊಳ್ಳಿ ಎಂದು ಹೇಳಿದರು.

ಎಲ್ಲಾ ವಿವಿಗಳಿಗೂ ಇದನ್ನು ಅಳವಡಿಸಿ : ಇತ್ತ ಕಾಂಗ್ರೆಸ್ ಸದಸ್ಯರು ಮಸೂದೆಯನ್ನು ಸ್ವಾಗತಿಸಿದರು‌. ಈ ಬಗ್ಗೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಳಕ್ಕೆ ಇದು ಅನೂಕಲಕರವಾಗಿದೆ. ಹುದ್ದೆಗಳ‌ ಭರ್ತಿಗೆ ಇದು ಅನುಕೂಲವಾಗಲಿದೆ. ಗುಜರಾತ್​ನಲ್ಲಿ ಎಲ್ಲಾ ವಿವಿಗಳಲ್ಲಿ ಇದನ್ನು ತರಲಾಗಿದೆ. ಮುಖ್ಯಮಂತ್ರಿಗಳೇ ಚಾನ್ಸಲರ್ ಆಗಿದ್ದಾರೆ. ಹಾಗಾಗಿ ಇಲ್ಲೂ ಇದನ್ನು ತಂದರೆ ಒಳ್ಳೆಯದು‌. ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ರಾಜಕೀಯದಲ್ಲಿ ಏನೂ ಬೇಕಾದ್ರೂ ಆಗಬಹುದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೇಕಾದರೆ ಇದು ಅಗತ್ಯ. ಇದನ್ನ ಪಂಚಾಯತ್ ರಾಜ್ ವಿವಿಗಷ್ಟೇ ಸೀಮಿತ ಮಾಡಬೇಡಿ. ಎಲ್ಲಾ ವಿವಿಗಳಿಗೂ ಇದನ್ನೇ ಅಳವಡಿಸಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ :ಅಂತರ್ಜಲ ತಿದ್ದುಪಡಿ, ರೋಪ್ ವೇಸ್ ಸೇರಿ ವಿಧಾನಸಭೆಯಲ್ಲಿ 8 ಮಸೂದೆಗಳು ಅಂಗೀಕಾರ - ASSEMBLY SESSION

ABOUT THE AUTHOR

...view details