ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಆರ್ಟಿಐ ಕಾರ್ಯಕರ್ತ ಗಿರೀಶ್ ಕಲ್ಲಳ್ಳಿ ಎಂಬವರು ಇಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ.
ಕೆಐಎಡಿಬಿ ಸಿಎ ನಿವೇಶನವನ್ನು ಹರಾಜು ಹಾಕದೆ ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ. ಬಿಡದಿ, ವಸಂತನರಸಾಪುರ, ಕೋಲಾರದ ನರಸಾಪುರ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಅಕ್ರಮವಾಗಿ ಕೆಐಎಡಿಬಿ ಸಿಎ ನಿವೇಶನ ಹಂಚಿಕೆ ಮಾಡಿರುವುದಾಗಿಯೂ ಅವರು ಆರೋಪಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಗಿರೀಶ್ ಕಲ್ಲಳ್ಳಿ, ರಾಜ್ಯಪಾಲರಿಗೆ ದೂರು ಕೊಟ್ಟು ಅಭಿಯೋಜನಾ ಮಂಜೂರಾತಿಗೆ ಕೇಳಿದ್ದೇನೆ. ಎಂ.ಬಿ.ಪಾಟೀಲ್ ಅವರ ಇಲಾಖೆಯ ಅಧೀನದಲ್ಲೇ ಕೆಐಎಡಿಬಿ ಇದೆ. ಕೆಐಎಡಿಬಿ 100 ಎಕರೆಗೂ ಹೆಚ್ಚು ಸಿಎ ಮೂಲೆ ನಿವೇಶನಗಳನ್ನು ಸಾಮಾನ್ಯ ಹಂಚಿಕೆ ದರದಲ್ಲಿ ಹಂಚಿಕೆ ಮಾಡಿದ್ದಾರೆ. ಈ ಸಿಎ ನಿವೇಶನಗಳನ್ನು ಹಿಂದೆ ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಬೇಕೆಂದು ಆದೇಶ ಮಾಡಿದ್ದರು. ಆದರೆ ಈಗ ಸಾಮಾನ್ಯ ದರದಲ್ಲಿ ಕೊಟ್ಟಿರುವುದರಿಂದ ಸರ್ಕಾರಕ್ಕೆ ಸುಮಾರು ರೂ. 300 ಕೋಟಿ ನಷ್ಟವಾಗಿದೆ ಎಂದು ದೂರಿದ್ದಾರೆ.