ಬೆಂಗಳೂರು: ಭಾರತ ಹಂತ ಹಂತವಾಗಿ ಜಾಗೃತಿಗೊಳ್ಳುತ್ತಿದೆ. ತನ್ನ ಮೂಲ ಸಂಸ್ಕೃತಿಯನ್ನು ಮತ್ತೆ ಕಂಡುಕೊಳ್ಳುತ್ತಿದೆ. ಜನವರಿ 22ರಂದು ನಡೆದ ಅಯೋಧ್ಯೆಯಲ್ಲಿ ಸಂಪನ್ನಗೊಂಡಿರುವ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯೂ ನಮ್ಮ ಮೂಲ ಸಂಸ್ಕೃತಿಯ ಪುನರುತ್ಥಾನದ ಸಾಕ್ಷಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ಬೆಂಗಳೂರು ಹೊರವಲಯದಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಆಯೋಜಿಸಲಾಗಿರುವ ಸಂಸ್ಕಾರ ಭಾರತಿ ಸಂಸ್ಥೆಯ ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಕಾರ್ಯಕ್ರಮದಲ್ಲಿ ಭರತಮುನಿ ವಿಶೇಷ ಪ್ರಶಸ್ತಿಯನ್ನು ಕಲಾಸಾಧಕರಿಗೆ ಪ್ರದಾನ ಮಾಡಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಘಟನೆಯು ಪ್ರತಿ ಗ್ರಾಮ ನಗರಗಳಲ್ಲಿ ಭಾರತೀಯತೆ ಜನಮಾನಸಗಳನ್ನು ಬೆಸೆಯುತ್ತಿದೆ. ಈ ವಿದ್ಯಮಾನವು ರಾಷ್ಟ್ರದ ಪ್ರಗತಿಯ ಧ್ಯೋತಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡರೂ ಭಾರತೀಯತೆಯನ್ನು ಪ್ರತಿನಿಧಿಸುವ ಕಲಾ ಸಾಧಕರು ಹಲವು ಕಾರಣಗಳಿಂದ ಅಷ್ಟಾಗಿ ಮುನ್ನಲೆಗೆ ಬಂದಿರಲಿಲ್ಲ. ಬಹುತೇಕ ವರ್ಷಗಳ ಕಾಲ ಅಂತವರು ಯಾವುದೇ ಪ್ರಾಮುಖ್ಯತೆಯನ್ನು ಪಡೆಯದೆ ಉಳಿಯುವಂತಾಯಿತು. ಇತ್ತೀಚಿನ ದಿನಗಳಲ್ಲಿ ಅಂತಹ ಕಲಾತಪಸ್ವಿಗಳು ಮತ್ತೆ ಜನಮಾನಸದಲ್ಲಿ ಜಾಗವನ್ನು ಪಡೆಯುತ್ತಿದ್ದಾರೆ. ಈ ರೀತಿ ಮತ್ತೆ ನಮ್ಮ ಮೂಲಕ ಕಲೆಗಳ ಪ್ರತಿಪಾದಕರು ಗುರುತಿಸುವಂತೆ ಮಾಡಿರುವುದು ಸಂಸ್ಕಾರ ಭಾರತಿ ಅಂತಹ ಸಂಸ್ಥೆಗಳ ಪ್ರಯತ್ನದಿಂದಾಗಿದೆ ಎಂದು ಅಭಿಪ್ರಾಯಪಟ್ಟರು.