ದಾವಣಗೆರೆ:ಸಿವಿಲ್ ಕಾಂಟ್ರಾಕ್ಟರ್ವೊಬ್ಬರಿಗೆ ಕೆಲಸಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಕೊಡಿಸುವುದಾಗಿ ನಂಬಿಸಿ, ಬರೋಬ್ಬರಿ 18 ಲಕ್ಷ ರೂ. ಮೋಸ ಮಾಡಿರುವ ಬಗ್ಗೆ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ಅಂಬಿಕಾನಗರದ ನಿವಾಸಿಯಾದ ಸಿವಿಲ್ ಕಾಂಟ್ರಾಕ್ಟರ್ ಶುಭಾಶ್ಚಂದ್ರ ಎಂಬುವರು ಅಪರಿಚಿತ ವ್ಯಕ್ತಿಯಿಂದ 18 ಲಕ್ಷ ಕಳೆದುಕೊಂಡವರು. ದೂರವಾಣಿ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯೊಬ್ಬ ನಿತ್ಯದ ಕಾಂಟ್ರಾಕ್ಟರ್ ಕೆಲಸಕ್ಕೆ ಅವಶ್ಯಕ ಕಚ್ಚಾವಸ್ತುಗಳನ್ನು ಕಳಿಸುವುದಾಗಿ ತಿಳಿಸಿದ್ದ. ಆದರೆ, ಶುಭಾಶ್ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ.
ಬಳಿಕ ಅಪರಿಚಿತ ವ್ಯಕ್ತಿ ಮತ್ತೊಮ್ಮೆ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಗುಜರಾತ್‌ನ ವಡೋದರದಲ್ಲಿ ತಮ್ಮ ಮುಖ್ಯ ಕಚೇರಿ ಇದೆ ಎಂದು ನಂಬಿಸಿದ್ದಾನೆ. ಮೆಟಲ್ ಬೀಮ್ ಕ್ರಷ್ ಬ್ಯಾರಿಯರ್ ಎಂಬ ಕಚ್ಚಾವಸ್ತುಗಳನ್ನು ಪೂರೈಸುವುದಾಗಿ ಹೇಳಿ 'ನೀತು ಎಂಟರ್ ಪ್ರೈಸಸ್' ಎಂಬ ಕಂಪನಿಗೆ ಸಂಬಂಧಿಸಿದ ಲೋಗೊ ಇರುವ ದಾಖಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದಾನೆ.
18 ಲಕ್ಷ ರೂ. ಮುಂಗಡ ನೀಡಿದ ಕಾಂಟ್ರಾಕ್ಟರ್:ಇದನ್ನೆಲ್ಲ ನಂಬಿದಶುಭಾಶ್ ಮೊದಲಿಗೆ ತಮಗೆ ಬೇಕಾದ ವಸ್ತುಗಳನ್ನು ಪಟ್ಟಿ ಮಾಡಿ, ಅಪರಿಚಿತ ವ್ಯಕ್ತಿಗೆ ಕಳುಹಿಸಿದ್ದಾರೆ. ಅದನ್ನು ನೋಡಿದ ವ್ಯಕ್ತಿಯು ಎಲ್ಲ ವಸ್ತುಗಳನ್ನು ಕಳುಹಿಸಿಕೊಡಲು ಒಟ್ಟು 26.10 ಲಕ್ಷ ರೂ. ಹಣ ಭರಿಸಬೇಕಾಗುತ್ತದೆ ಎಂದಿದ್ದಾನೆ. ಬಳಿಕ ಮುಂಗಡವಾಗಿ 18 ಲಕ್ಷ ರೂ. ನೀಡುವಂತೆ ತಿಳಿಸಿದ್ದಾನೆ. ಇದನ್ನು ನಂಬಿದ ಸುಭಾಶ್ ಮುಂಗಡವಾಗಿ ಅಪರಿಚಿತನ ಬ್ಯಾಂಕ್ ಖಾತೆಗೆ 18 ಲಕ್ಷ ರೂ. ಕಳುಹಿಸಿದ್ದಾರೆ.