ಶಿವಮೊಗ್ಗ:ಬಂಧಿಸಲು ಹೋದಾಗ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಗರದ ಗರುಡ ಲೇಔಟ್ನಲ್ಲಿ ಇಂದು ನಡೆದಿದೆ. ಹಬಿಬ್ವುಲ್ಲಾ ಅಲಿಯಾಸ್ ಅಮ್ಮು ಎಂಬ ರೌಡಿಶೀಟರ್ ಕಾಲಿಗೆ ಗುಂಡೇಟು ಬಿದ್ದಿದೆ.
ಪ್ರಕರಣವೊಂದರ ಆರೋಪಿಯಾಗಿರುವ ಹಬಿಬ್ವುಲ್ಲಾ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗರುಡ ಲೇಔಟ್ನಲ್ಲಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಕರ್ಕಿ ನೇತೃತ್ವದಲ್ಲಿ ಸಿಬ್ಬಂದಿ ಬೆಳಗ್ಗೆ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇನ್ಸ್ಪೆಕ್ಟರ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಇದನ್ನು ಲೆಕ್ಕಿಸದೆ ಪರಾರಿಯಾಗಲು ಯತ್ನಿಸಿದಾಗ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಆತನನ್ನು ಬಂಧಿಸಿ, ಮಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ (ETV Bharat) ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿ, "ಹಬಿಬ್ವುಲ್ಲಾ ಓರ್ವ ರೌಡಿಶೀಟರ್. ಈತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಒಟ್ಟು 6 ಪ್ರಕರಣಗಳಿವೆ. ವ್ಯಕ್ತಿಯೊಬ್ಬನ ಬೆನ್ನಿಗೆ ಚಾಕು ಇರಿದ ಪ್ರಕರಣದಲ್ಲಿ ಈತನ ವಿರುದ್ಧ ಸೆಪ್ಟೆಂಬರ್ 13ರಂದು ತುಂಗಾನಗರ ಠಾಣೆಯಲ್ಲಿ ಸೆಕ್ಷನ್ 307ರ ಅಡಿ ಪ್ರಕರಣ ದಾಖಲಾಗಿತ್ತು" ಎಂದು ತಿಳಿಸಿದರು.
"ಹಬಿಬ್ವುಲ್ಲಾನ ಪತ್ತೆಗಾಗಿ ತುಂಗಾನಗರ ಪೊಲೀಸ್ ಠಾಣೆಯ ಸಿಪಿಐ ಗುರುರಾಜ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಗರುಡ ಲೇಔಟ್ನಲ್ಲಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಸಿಬ್ಬಂದಿ ಪ್ರಾಣ ರಕ್ಷಣೆಗೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನು ಲೆಕ್ಕಿಸದಿದ್ದಾಗ ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಹಬಿಬ್ವುಲ್ಲಾ 2020ರಲ್ಲಿ ಜೈಲಿಗೆ ಹೋಗಿ ಜುಲೈನಲ್ಲಿ ಬಿಡುಗಡೆಯಾಗಿ ಮತ್ತೆ ಕೊಲೆ ಯತ್ನ ನಡೆಸಿದ್ದ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು: 'ಗಾಯ್ ಪಾರ್ದಿ ಗ್ಯಾಂಗ್'ನ ಡಕಾಯಿತನ ಮೇಲೆ ಫೈರಿಂಗ್ - firing on accused