ಬೆಂಗಳೂರು : ರೌಡಿ ಆಸಾಮಿಯೊಬ್ಬನನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಬಾಣಸವಾಡಿಯ ರಾಮಯ್ಯ ಲೇಔಟ್‌ನ 3ನೇ ಮುಖ್ಯರಸ್ತೆಯ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಹತ್ಯೆಯಾದವನನ್ನು ದಿನೇಶ್ ಎಂದು ಗುರುತಿಸಲಾಗಿದೆ. ಮೃತನ ಜೊತೆ ಬಂದಿದ್ದ ಐದಾರು ಜನರ ತಂಡ ಏಕಾಏಕಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದೆ.
''ಇಂದು ಮಧ್ಯಾಹ್ನ ಮೃತ ವ್ಯಕ್ತಿ ಸೇರಿದಂತೆ 7 ಜನ, ಮೊದಲು ರೂಮ್ ಕೇಳಿಕೊಂಡು ಬಂದಿದ್ದರು. ಅದಾದ ಬಳಿಕ ಹಣ ಕೇಳಿದಾಗ ಯುಪಿಐ ಮೂಲಕ ಪಾವತಿ ಮಾಡುವುದಾಗಿ ಹೇಳಿದ್ದರು. 'ಯುಪಿಐ ಪಾವತಿ ಆಯ್ಕೆ ಇಲ್ಲ, ನಗದು ಪಾವತಿ ಮಾಡಿ' ಎಂದಾಗ ಇಬ್ಬರು ಹಣ ತರಲು ಆಚೆ ಹೋಗಿದ್ದರು. ನಂತರ ದಿನೇಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿದ್ದಾರೆ ''ಎಂದು ಅಪಾರ್ಟ್‌ಮೆಂಟಿನ ರಿಸೆಪ್ಶನಿಸ್ಟ್ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ, ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಬಾಣಸವಾಡಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಬೆಂಗಳೂರಲ್ಲಿ ವ್ಯಕ್ತಿ ಕೊಲೆ: ದೂರು ನೀಡಿದ್ದ ಸ್ನೇಹಿತರೇ ಅರೆಸ್ಟ್ ಆಗಿದ್ದೇಕೆ? - Murder Case
ಮತ್ತೊಂದೆಡೆ ಮದ್ಯ ಸೇವಿಸುವಾಗ ಉಂಟಾದ ಜಗಳದಲ್ಲಿ ಮತ್ತೊಬ್ಬ ವ್ಯಕ್ತಿ ಹತ್ಯೆಯಾಗಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರದಲ್ಲಿ ನಡೆದಿದೆ.
ಉತ್ತರಪ್ರದೇಶದ ಗೋರಕ್ ಪುರ ಮೂಲದ ನಿವಾಸಿ ರಾಜಕುಮಾರ್ (35) ಹತ್ಯೆಗೊಳಗಾದ ವ್ಯಕ್ತಿ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನಾಗವಾರದಲ್ಲಿ ರೂಮ್ ಮಾಡಿಕೊಂಡಿದ್ದ. ಪೇಂಟಿಂಗ್ ಕೆಲಸ ಮಾಡುತ್ತಿದ್ದನು. ನಿನ್ನೆ ಹೋಳಿ ಹಬ್ಬ ಹಿನ್ನೆಲೆ ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡು ಒಟ್ಟಿಗೆ ಪಾರ್ಟಿ ಮಾಡಿದ್ದರು.
ಈ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ದೊಣ್ಣೆಯಿಂದ ಹೊಡೆದು ಚಾಕುವಿನಿಂದ ತಿವಿದಿದ್ದಾರೆ. ಮಂಗಳವಾರ ಸಂಜೆ ಈ ಕೃತ್ಯ ನಡೆದಿದೆ. ರಾತ್ರಿವರೆಗೂ ಶವದ ಜೊತೆಯಿದ್ದು ಬಳಿಕ ಠಾಣೆಗೆ ಬಂದು, ಅಪರಿಚಿತರು ರಾಜಕುಮಾರ್ ಎಂಬಾತನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಸ್ನೇಹಿತರಿಬ್ಬರು ದೂರು ನೀಡಿದ್ದರು. ಇವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅನುಮಾನ ವ್ಯಕ್ತವಾಗಿದ್ದು ಈ ಹಿನ್ನೆಲೆ ದೂರು ನೀಡಿದ ಸ್ನೇಹಿತರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.