ಆನೇಕಲ್(ಬೆಂಗಳೂರು): ರಾತ್ರಿ ಹುಟ್ಟುಹಬ್ಬದ ಗದ್ದಲವನ್ನು ಪ್ರಶ್ನಿಸಿದ ಪಕ್ಕದ ಮನೆ ಮಹಿಳೆ ಮತ್ತು ಆಕೆಯ ತಮ್ಮನಿಗೆ ರೌಡಿಶೀಟರ್ವೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ಶನಿವಾರ ರಾತ್ರಿ ನಡೆದಿದೆ. ಆರೋಪಿಯನ್ನು ರೌಡಿಶೀಟರ್ ಕರಿಯ ವಿಜಿ ಎಂದು ಗುರುತಿಸಲಾಗಿದೆ.
ಏನಾಯ್ತು?: ರೌಡಿಶೀಟರ್ ಕರಿಯ ವಿಜಿ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮದ್ಯ ಪಾರ್ಟಿ ಆಯೋಜಿಸಿದ್ದ. ಮದ್ಯದ ಅಮಲಿನಲ್ಲಿ ಡಿಜೆ ಗದ್ದಲವೂ ಜೋರಾಗಿತ್ತು. ಇದನ್ನು ಪಕ್ಕದ ಮನೆಯ ಮಂಜುಳಾ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ರೌಡಿಶೀಟರ್, ಚಾಕುವಿನಿಂದ ಇರಿದಿದ್ದಾನೆ ಎಂದು ನೆರೆಮನೆಯವರು ತಿಳಿಸಿದ್ದಾರೆ.
ಮಂಜುಳ ಸಹೋದರಿ ಕವಿತಾ ಮಾತನಾಡಿದರು (ETV Bharat) ಈ ಕುರಿತು ಮಂಜುಳಾ ಸಹೋದರಿ ಕವಿತಾ ಮಾತನಾಡಿ, ''ಬರ್ತ್‌ಡೇ ಪಾರ್ಟಿಯ ವೇಳೆ ಗದ್ದಲ ಮಾಡುತ್ತಿದ್ದ ಬಗ್ಗೆ ರೌಡಿಶೀಟರ್ ಕರಿಯ ವಿಜಿ ಎಂಬಾತನನ್ನು ಮಂಜುಳಾ ಪ್ರಶ್ನಿಸಿದ್ದಾರೆ. ಆಗ ಆತ, ನಮ್ಮ ಕಟ್ಟಡದಲ್ಲಿ ಕುಡಿಯುತ್ತೇವೆ, ತಿನ್ನುತ್ತೇವೆ. ನೀನ್ಯಾರು ಕೇಳಲು? ಎಂದು ಅವಾಚ್ಯ ಪದಗಳಿಂದ ನಿಂದಿಸಿದ. ನಂತರ ಆಕೆಗೆ ಚಾಕುವಿನಿಂದ ತಿವಿದ. ಪ್ರಶ್ನಿಸಿದ ತಮ್ಮ ವಿಶ್ವನಾಥ್ಗೂ ತಿವಿದಿದ್ದಾನೆ. ಆತ ಗಾಯಗೊಂಡು ಕೆಳಗೆ ಬಿದ್ದ. ನಂತರ ಮಂಜುಳಾಗೆ ಮತ್ತೆರಡು ಬಾರಿ ತಿವಿದ. ಈ ವೇಳೆ ಅಲ್ಲಿದ್ದವರು ಕೋಲಿನಿಂದ ಹಲ್ಲೆ ನಡೆಸಿದರು. ನಾನು ಭಯಭೀತಳಾಗಿ ಪೊಲೀಸ್ ಠಾಣೆಗೆ ಹೋದೆ. ಕೂಡಲೇ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು'' ಎಂದು ಮಾಹಿತಿ ನೀಡಿದರು.
ಪೊಲೀಸರಿಂದ ಘಟನಾ ಸ್ಥಳದ ಪರಿಶೀಲನೆ (ETV Bharat) ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿಜಿ ಮತ್ತು ಸಹಚರರಿಗೆ ಶೋಧ ನಡೆಯುತ್ತಿದೆ.
ಇದನ್ನೂ ಓದಿ:ಪ್ರಿಯಕರನಿಗೆ ಚಾಕು ಇರಿದ ಪ್ರಕರಣ; ಮಾಜಿ ಪ್ರಿಯತಮೆ ಅರೆಸ್ಟ್ - KNIFE STABBING