ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಹಾವೇರಿಯಲ್ಲಿ ಹೆಚ್ಚುತ್ತಿರುವ ಸೈಬರ್​ ಅಪರಾಧ ಪ್ರಕರಣಗಳು: ಮೋಸ ಹೋದವರಲ್ಲಿ ವೈದ್ಯರು, ಇಂಜಿನಿಯರ್‌, ಉನ್ನತ ಅಧಿಕಾರಿಗಳೇ ಹೆಚ್ಚು! - Cyber Crime

ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ಕಳೆದ 3 ವರ್ಷದಲ್ಲಿ 12 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ. 305 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.

CYBER CRIME
ಸಾಂದರ್ಭಿಕ ಚಿತ್ರ (ETV Bharat)

ಹಾವೇರಿ:ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಇದನ್ನು ಮಟ್ಟಹಾಕಲೆಂದೇ ಪ್ರತ್ಯೇಕ ಸೈಬರ್ ಕ್ರೈಂ ತೆರೆಯಲಾಗಿದೆ. ದೇಶ ವಿದೇಶಗಳಲ್ಲಿರುವ ಸೈಬರ್​ ವಂಚಕರು ಕುಳಿತಲ್ಲೇ ಅಂತರ್ಜಾಲದ ಮೂಲಕ ಹೆಚ್ಚು ವಿದ್ಯಾವಂತರನ್ನೇ ಗುರಿಯಾಗಿಸಿಟ್ಟುಕೊಂಡು ಹಣ ಲಪಟಾಯಿಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಈ ವರ್ಷ ಸೈಬರ್ ಕಳ್ಳರು ಸಾರ್ವಜನಿಕರನ್ನು ಯಾಮಾರಿಸಿ ಕೋಟಿ‌ ಕೋಟಿ ರೂಪಾಯಿ ಲಪಟಾಯಿಸಿದ್ದಾರೆ. ವಿಪರ್ಯಾಸ ಎಂದರೆ ಸೈಬರ್ ಕಳ್ಳರಿಗೆ ಸುಲಭವಾಗಿ ತುತ್ತಾಗುತ್ತಿರುವವರು ವಿದ್ಯಾವಂತರೇ ಅಧಿಕ! ಅದರಲ್ಲೂ ವೈದ್ಯರು, ಇಂಜಿನಿಯರ್‌ಗಳು ಸೇರಿದಂತೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸೈಬರ್ ಕಳ್ಳರ ಬಲೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ದಿನಕ್ಕೊಂದು ಹೊಸ ಹೊಸ ಉಪಾಯಗಳ ಮೂಲಕ ಫೀಲ್ಡ್‌ಗೆ ಇಳಿಯುವ ಸೈಬರ್ ವಂಚಕರು, ವಿದ್ಯಾವಂತ, ಆರ್ಥಿಕವಾಗಿ ಸಬಲರಿರುವ ಜನರನ್ನೇ ನಂಬಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸರು.

ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತಿರುವುದು (ETV Bharat)

ಮೊಬೈಲ್​ ಮೂಲಕವೇ ಮಾಹಿತಿ ಪಡೆದು ವಂಚನೆ:ಮೊದಲು ತಮ್ಮ ಕೈಯಿಂದಲೇ ಹಣ ಹಾಕಿ ಜನರನ್ನು ನಂಬಿಸ್ತಾರೆ. ಖಾಸಗಿ ಕಂಪನಿ, ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿ ಮೊಬೈಲ್ ಮೂಲಕವೇ ಮಾಹಿತಿ ಪಡೆದು ಜನರಿಗೆ ಪಂಗನಾಮ ಹಾಕಿದ್ದಾರೆ. ಜಿಲ್ಲೆಯಲ್ಲಿ ಕಳೆದ 3 ವರ್ಷದಲ್ಲಿ 12 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ. ಕಳೆದ 3 ವರ್ಷಗಳಲ್ಲಿ 305 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ. 305 ಪ್ರಕರಣಗಳಲ್ಲಿ 12,48,59,787 ರೂಪಾಯಿ ವಂಚನೆ ಮಾಡಿದ್ದಾರೆ. 2022ರಲ್ಲಿ 118 ಪ್ರಕರಣಗಳಲ್ಲಿ 1,88,23,694 ರೂಪಾಯಿ, 2023ರಲ್ಲಿ 107 ಪ್ರಕರಣಗಳಲ್ಲಿ 2,16,69,302 ರೂಪಾಯಿ, 2024 ಜನವರಿಯಿಂದ 80 ಪ್ರಕರಣಗಳಲ್ಲಿ 8,43,66,791 ರೂಪಾಯಿ ವಂಚನೆ ಮಾಡಿದ್ದಾರೆ.

ಸೋಷಿಯಲ್​ ಮೀಡಿಯಾ ಮೂಲಕ ಮೋಸ:ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಳ್ಳುವ ಮೂಲಕ ಒಂದು ತರದ ಜನರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಮೊಬೈಲ್‌ಗಳಲ್ಲಿ ಬರುವ ಬಣ್ಣ ಬಣ್ಣದ ಆಮಿಷಗಳಿಗೆ ಮರುಳಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನಿಮಗೆ ಹಣ ಡಬಲ್ ಮಾಡಿ‌ಕೊಡ್ತೇವೆ, ಬಡ್ಡಿ ಜಾಸ್ತಿ ಕೊಡ್ತೀವಿ, ಶೇರ್ ಮಾರ್ಕೇಟ್​ನಲ್ಲಿ ಇನ್ವೆಸ್ಟ್ ಮಾಡಿಸಿ‌ ಲಾಭ‌ ಮಾಡಿಸಿ ಕೊಡ್ತೀವಿ, OTP ಹೇಳಿ, ನಿಮ್ಮ ಮೊಬೈಲ್ ನಂಬರ್ ಕೊಡಿ.. ಎಂದೆಲ್ಲಾ ಸೈಬರ್ ಕಳ್ಳರು ಜನರನ್ನು ನಂಬಿಸಿ ಮೋಸ ಮಾಡ್ತಾನೇ ಬರುತಿದ್ದಾರೆ.

ನಿಮ್ಮ ಮೊಬೈಲ್‌ಗೆ ಆಫರ್ ಬಂದಿದೆ, ನೀವು ಹಣ ಹಾಕಿದರೆ ತಿಂಗಳಲ್ಲಿ ಡಬಲ್ ಆಗುತ್ತೆ, ನೀವು ಮನೆಯಲ್ಲಿ ಕುಳಿತು ಹಣ ಸಂಪಾದಿಸಬಹುದು. ದಿನಕ್ಕೆ ಎರಡುಮೂರು ಗಂಟೆ ವ್ಯಯಿಸಿದರೆ ಸಾಕು ಎಂದು ಹೇಳಿ ಸ್ಕ್ರೀನ್ ಶಾಟ್ ಆದು ಇದು ಎಂದು ಹೇಳಿ ಸೈಬರ್ ಕಳ್ಳರು ವಂಚನೆ ಮಾಡುತ್ತಿದ್ದಾರೆ. ಅಧಿಕ ಹಣ ಇರುವವರಿಗೆ ಮತ್ತೊಂದು ರೀತಿಯಲ್ಲಿ ವಂಚಿಸಿ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಹಣ ಹಾಕುತ್ತಿದ್ದಂತೆ ಅವರ ಮೊಬೈಲ್ ಬ್ಯುಸಿಯಾಗುತ್ತೆ. ಇಲ್ಲವೇ ಸ್ವಿಚ್ಡ್​ ಆಫ್​ ಆಗುತ್ತೆ. ಇನ್ನು ಅತ್ತ ನಮ್ಮ ಅಕೌಂಟ್ ಹಣ ಕ್ಷಣಾರ್ಧದಲ್ಲಿ ಖಾಲಿಯಾಗಿರುತ್ತದೆ. ಈ ಕುರಿತಂತೆ ಮೂಲ ಹುಡುಕುತ್ತಾ ಹೋದರೆ ದೇಶ ವಿದೇಶ ನೆರೆ ರಾಜ್ಯಗಳ ನೆಂಟಿರುತ್ತೆ. ವಿಚಿತ್ರ ಅಂದರೆ ಸೈಬರ್ ಕಳ್ಳರೇ ಕೆಲವೊಂದು ಅಪ್ಲಿಕೇಶನ್ ತಯಾರಿಸಿ ಸಾರ್ವಜನಿಕರಿಗೆ ಡೌನ್​ಲೋಡ್ ಮಾಡಿಕೊಳ್ಳುವಂತೆ ತಿಳಿಸುತ್ತಾರೆ. ಆರಂಭದಲ್ಲಿ ಸ್ವಲ್ಪ ಹಣದ ಆಮಿಷ ತೋರಿಸಿ ಜನರ ಖಾತೆಗೆ ಹಣ ಹಾಕುತ್ತಾರೆ. ಯಾವಾಗ ಹೆಚ್ಚು ಹಣ ಜನರು ಹಾಕಲಾರಂಭಿಸುತ್ತಾರೆ. ಹಣ ಖಾತೆಗೆ ಜಮಾ ಆಗುತ್ತಿದ್ದಂತೆ ನಿರ್ಗಮಿಸುತ್ತಾರೆ. ಈ ರೀತಿಯ ವಂಚನೆಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ಹಾಗಾಗಿ ಜಾಗೃತರಾಗಿರಿ ಎನ್ನುತ್ತಾರೆ ಪೊಲೀಸರು.

ಸೈಬರ್​ ವಂಚನೆ ಬಗ್ಗೆ ಎಸ್​​ಪಿ ಅಂಶುಕುಮಾರ್ ಹೇಳುವುದಿಷ್ಟು:''ಜನರು ಹೆಚ್ಚು ಜಾಗೃರಾಗಬೇಕು. ಜನರು ಕರೆಗಳ ಮೂಲಕ ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಬಣ್ಣಬಣ್ಣದ ಆಮಿಷಗಳಿಗೆ ಒಳಗಾಗಬಾರದು. ಯಾವುದೇ ಕಾರಣಕ್ಕೂ ರಾತ್ರಿ ಕಳೆಯುತ್ತಿದ್ದಂತೆ ಶ್ರೀಮಂತರಾಗಬೇಕು ಎನ್ನುವ ದುರಾಸೆ ಬಿಡಬೇಕು. ಯಾವುದೇ ಕರೆ ಬರಲಿ, ಮೆಸೇಜ್ ಬರಲಿ ಪರಾಮರ್ಶಿಸಿ ನೋಡಬೇಕು. ಆರೋಗ್ಯ ಮಾಹಿತಿ, ವಿದೇಶಿಯಾನ, ಲಾಟರಿ, ಮೊಬೈಲ್ ಬಹುಮಾನ್ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡಿದಾಗ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಸೈಬರ್ ಕ್ರೈಂ ಸ್ಟೇಷನಗಳಿಗೆ ದೂರು ನೀಡಿ ಸಂಶಯಾಸ್ಪದ ನಂಬರ್ ಇದ್ದರೆ ತಿಳಿಸಬೇಕು. ತಾವು ಮೋಸಕ್ಕೆ ಒಳಗಾಗಿದ್ದೇವೆ ಎಂದು ಮನೆಯಲ್ಲಿ ಕುಳಿತುಕೊಳ್ಳದೇ ಸೈಬರ್ ಕ್ರೈಂ ಪೊಲೀಸರ ಸಂಪರ್ಕಿಸಿದರೆ ಮುಂದಿನ ಹಣ ಹೋಗುವದನ್ನು ತಡೆಯಬಹುದು. ಯಾವುದೇ ಬ್ಯಾಂಕ್ ಹೆಸರಲ್ಲಿ, ಕಂಪನಿಗಳ ಹೆಸರಲ್ಲಿ ಕರೆ ಬಂದಾಗ ಹತ್ತಿರದ ಬ್ಯಾಂಕ್ ಸಂಪರ್ಕಿಸಿ ಮಾಹಿತಿ ಸರಿ ಇದೆಯಾ ಎಂದು ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಒಟಿಪಿಯನ್ನ ಹೇಳಬಾರದು. ಒಟಿಪಿ ಪಡೆಯಲು ನಾನಾ ತರದ ಪ್ರಯೋಗಗಳನ್ನು ಸೈಬರ್ ಕಳ್ಳರು ಹುಡುಕುತ್ತಾರೆ. ಆ ಪ್ರಯೋಗಗಳಿಗೆ ಮರುಳಾಗಬಾರದು. ಇನ್ನು ಸಿಕ್ಕಸಿಕ್ಕ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು. ಮೊಬೈಲ್‌ನಲ್ಲಿ ಬರುವ ಸುಮಧುರ ಧ್ವನಿ, ಅಂದದ ಪೋಟೋಗಳಿಗೆ ಮರುಳಾಗಿ ದುಡಿದ ಹಣ ಕಳೆದುಕೊಳ್ಳಬಾರದು. ಜನರು ಜಾಗೃತರಾಗುವವರಿಗೆ ಈ ರೀತಿಯ ಅಪರಾಧಗಳು ನಡೆಯುತ್ತಲೇ ಇರುತ್ತವೆ. ಜನರು ಮೊದಲು ಜಾಗೃತರಾಗಬೇಕು. ಜೊತೆಗೆ ಅಧಿಕ ಹಣದ ಆಮಿಷದಿಂದ ದೂರವಿರಬೇಕಾಗಿದೆ'' ಎನ್ನುತ್ತಾರೆ ಹಾವೇರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್.

ಇದನ್ನೂ ಓದಿ:ಸೈಬರ್​ ಕಳ್ಳರ ಹೊಸ ತಂತ್ರ: ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಫೋಟೋ, ವಿವರ ಪೋಸ್ಟ್‌ ಮಾಡುವ ಮುನ್ನ ಎಚ್ಚರ! - Cyber Crimes

ABOUT THE AUTHOR

...view details