ಬೆಳಗಾವಿ:ನಿವೃತ್ತರಾದ ಬಳಿಕ ಬಹುತೇಕರು ಇನ್ನು ಸಾಕು ದುಡಿಯೋದು ಅಂತಾ ಮನೆ ಹಿಡಿಯುತ್ತಾರೆ. ಕುಟುಂಬಸ್ಥರ ಜೊತೆ ನೆಮ್ಮದಿ ಜೀವನ ನಡೆಸುತ್ತಾರೆ. ಆದರೆ, ಇಲ್ಲೊಬ್ಬ ನಿವೃತ್ತ ಸಂಚಾರಿ ನಿಯಂತ್ರಕ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬದಲಾಗಿ, ಕೃಷಿಯಲ್ಲಿ ತೊಡಗಿ ಲಕ್ಷ.. ಲಕ್ಷ ಆದಾಯ ಜೇಬಿಗಿಳಿಸುತ್ತಿದ್ದಾರೆ. ಊರಿನ ಯುವಕರಿಗೂ ಮಾದರಿಯಾಗಿ, ಆದರ್ಶ ರೈತರಾಗಿ ಹೊರ ಹೊಮ್ಮಿದ್ದಾರೆ. ಯಾರು ಆ ರೈತ..? ಏನವರ ಸಾಧನೆ ಅಂತೀರಾ ಈ ಸ್ಟೋರಿ ನೋಡಿ.
ಚೆನ್ನಮ್ಮನ ಕಿತ್ತೂರು ತಾಲೂಕಿನ ಕಾದ್ರೊಳ್ಳಿ ಗ್ರಾಮದ ಪ್ರಕಾಶ ಹರಿವಿಠಲ ಕುಲಕರ್ಣಿ ಎಂಬುವರೇ ಸುಗಂಧರಾಜ ಹೂವು ಬೆಳೆದು ತಮ್ಮ ಬಾಳು ಹಸನಾಗಿಸಿಕೊಂಡವರು.
30 ಗುಂಟೆ, 6 ಟನ್ ಸುಗಂಧರಾಜ ಹೂವು: ಬರೋಬ್ಬರಿ 6 ಲಕ್ಷ ಆದಾಯ (ETV Bharat) ಪ್ರಕಾಶ ಕುಲಕರ್ಣಿ ಅವರು ಕೆಎಸ್ಆರ್ಟಿಸಿ ಬೆಳಗಾವಿ ವಿಭಾಗದಲ್ಲಿ ಕಂಡಕ್ಟರ್ ಆಗಿ, ಬಳಿಕ ಸಾರಿಗೆ ನಿಯಂತ್ರಕರಾಗಿ 34 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿ ಬಳಿಕ ಇವರು ಮನೆ ಹಿಡಿದು ಕುಳಿತುಕೊಳ್ಳಲಿಲ್ಲ. ತಮ್ಮ ಮೂಲ ವೃತ್ತಿ ಕೃಷಿ ಕಾಯಕದ ಕಡೆ ಮುಖ ಮಾಡಿದ್ದರು. ಕಳೆದ ವರ್ಷ ಮಾರ್ಚ್ನಲ್ಲಿ ತಮ್ಮ 30 ಗುಂಟೆ ಜಮೀನಿನಲ್ಲಿ ಸುಗಂಧರಾಜ ಹೂವು ಬೆಳೆದಿದ್ದಾರೆ.
30 ಗುಂಟೆ, 6 ಟನ್ ಸುಗಂಧರಾಜ ಹೂವು: ಬರೋಬ್ಬರಿ 6 ಲಕ್ಷ ಆದಾಯ (ETV Bharat) ಬೀಜ ನೆಟ್ಟ ಐದಾರು ತಿಂಗಳ ಬಳಿಕ ಅಕ್ಟೋಬರ್ ತಿಂಗಳಿನಿಂದ ಹೂವಿನ ಕೊಯ್ಲು ಆರಂಭವಾಗಿದ್ದು, ಈ ವರ್ಷದ ಅಕ್ಟೋಬರ್ವರೆಗೆ ಸುಮಾರು 6 ಟನ್ ಇಳುವರಿ ಬಂದಿದೆ. ಪ್ರತಿ ಕೆಜಿಗೆ 100 ರೂ. ಸ್ಥಳೀಯವಾಗಿ ಹೂವು ಮಾರಾಟ ಮಾಡಿರುವ ಪ್ರಕಾಶ ಅವರು, ಈವರೆಗೆ ಬರೊಬ್ಬರಿ 6 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಹೂವು ಬೆಳೆಯಲು ಬೀಜ, ಗೊಬ್ಬರ ಸೇರಿ 1.5 ಲಕ್ಷ ರೂ. ವ್ಯಯಿಸಿದ್ದಾರೆ. ಇನ್ನು 2 ವರ್ಷ ಸುಗಂಧರಾಜ ಭರಪೂರ ಲಾಭ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.
ಸುಗಂಧರಾಜ ಹೂವು (ETV Bharat) ವಾಕಿಂಗ್ ಮಾಡುತ್ತಾ ಕೃಷಿ:ಪ್ರಕಾಶ ಅವರಿಗೆ ಒಟ್ಟು 12 ಎಕರೆ ಜಮೀನಿದ್ದು, 2 ಎಕರೆ ಜಮೀನಿನಲ್ಲಿ ಸ್ವಂತ ಕೃಷಿ ಮಾಡುತ್ತಿದ್ದಾರೆ. ಇನ್ನುಳಿದ 10 ಎಕರೆ ಭೂಮಿಯನ್ನು ಬೇರೆ ರೈತರಿಗೆ ಪಾಲುದಾರಿಕೆಗೆ ಹಚ್ಚಿದ್ದಾರೆ. ಬೆಳಗ್ಗೆ 6 ಗಂಟೆಗೆ ವಾಕಿಂಗ್ ಬರುವ ಪ್ರಕಾಶ ಅವರು ಎರಡು ಗಂಟೆಯಲ್ಲಿ ಸುಗಂಧರಾಜ ಹೂವಿನ ಕೆಲಸ ಮಾಡುತ್ತಾರೆ. ಒಂದಿಬ್ಬರು ಕೂಲಿಕಾರರ ಸಹಾಯದೊಂದಿಗೆ ಹೂವು ಕೊಯ್ದು ಕಿತ್ತೂರು, ಬೈಲಹೊಂಗಲ, ಇಟಗಿರೋಡ್ ಮಾರುಕಟ್ಟೆಗೆ ಕಳಿಸುತ್ತಾರೆ. ಇನ್ನುಳಿದ ಸಮಯದಲ್ಲಿ ಆರಾಮವಾಗಿ ಮನೆ ಕೆಲಸ ಮಾಡಿಕೊಂಡು, ಕುಟುಂಬಸ್ಥರ ಜೊತೆಗೆ ಸಂತಸದ ಜೀವನ ನಡೆಸುತ್ತಿದ್ದಾರೆ.
30 ಗುಂಟೆ, 6 ಟನ್ ಸುಗಂಧರಾಜ ಹೂವು: ಬರೋಬ್ಬರಿ 6 ಲಕ್ಷ ಆದಾಯ (ETV Bharat) ಹೂವು ಬೆಳೆಯುವ ವಿಧಾನ:ಜಮೀನಿನಲ್ಲಿ ಮೂರು ಅಡಿ ಅಂತರದಲ್ಲಿ ಸಾಲು ಬಿಟ್ಟಿದ್ದಾರೆ. ಬೀಜದಿಂದ ಬೀಜಕ್ಕೆ 10 ಇಂಚು ಅಂತರವಿದೆ. ಹೆಚ್ಚಿನ ಪ್ರಮಾಣದಲ್ಲಿ ಸೆಗಣಿ ಗೊಬ್ಬರ ಬಳಸಿದ್ದು, ಶೇ.10ರಷ್ಟು ಮಾತ್ರ ರಾಸಾಯನಿಕ ಗೊಬ್ಬರ ಬಳಸಲಾಗಿದೆ. ಬೇಸಿಗೆಯಲ್ಲಿ 12 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಸರಿಯಾಗಿ ಕಳೆ ನಿರ್ವಹಣೆ ಮಾಡಬೇಕು. ಶೇ.99ರಷ್ಟು ಕೀಟಭಾದೆ ಇರುವುದಿಲ್ಲ. ರೋಗಗಳ ಕಾಟವೂ ಇಲ್ಲ ಎನ್ನುತ್ತಾರೆ ಈ ರೈತ.
30 ಗುಂಟೆ, 6 ಟನ್ ಸುಗಂಧರಾಜ ಹೂವು: ಬರೋಬ್ಬರಿ 6 ಲಕ್ಷ ಆದಾಯ (ETV Bharat) ಕಾರ್ಯಕ್ರಮವೊಂದನ್ನು ವೀಕ್ಷಿಸಿ ಆಸಕ್ತಿ ಬೆಳಸಿಕೊಂಡ ರೈತ:ಖಾಸಹಿ ವಾಹಿನಿಯೊಂದರ ಕೃಷಿರಂಗ ಕಾರ್ಯಕ್ರಮದಲ್ಲಿ ಶಿವಮೊಗ್ಗದ ನರಸಿಂಹಮೂರ್ತಿ ಎಂಬುವವರು ಸುಗಂಧರಾಜ ಹೂವಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದರಿಂದ ಪ್ರೇರಿತಗೊಂಡು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬೀಜ ತಂದು ನೆಟ್ಟಿದ್ದೇನೆ. ಕಳೆದ ವರ್ಷದಿಂದ ಒಳ್ಳೆಯ ಇಳುವರಿ ಬಂದಿದ್ದು, ಅಧಿಕ ಲಾಭವಾಗಿದೆ. ಇದೊಂದು ವಾಣಿಜ್ಯ ಬೆಳೆಯಾಗಿದೆ. ಮನೆ ನಿರ್ವಹಣೆ ಜೊತೆಗೆ ಬೇರೆ ಖರ್ಚುಗಳಿಗೆ ಇದರ ಲಾಭ ಬಳಸಿದ್ದು, ನಮಗೆ ದೊಡ್ಡ ಆರ್ಥಿಕ ಶಕ್ತಿ ನೀಡಿದೆ ಎಂದು ಈಟಿವಿ ಭಾರತಕ್ಕೆ ರೈತ ಪ್ರಕಾಶ ಕುಲಕರ್ಣಿ ತಿಳಿಸಿದರು.
ಕಷ್ಟಪಟ್ಟು ದುಡಿದರೆ ಎಲ್ಲವೂ ಸಾಧ್ಯ:ಭೂಮಿ ತಾಯಿ ಕಷ್ಟಪಟ್ಟು ದುಡಿದರೆ ಎಂದೂ ನಮ್ಮ ಕೈ ಬಿಡುವುದಿಲ್ಲ. ಒಂದಿಲ್ಲೊಮ್ಮೆ ಲಾಭ ಆಗಿಯೇ ಆಗುತ್ತದೆ. ನಮ್ಮದು ಮೂಲತಃ ಕೃಷಿ ಕುಟುಂಬ. ಈಗ ನಿವೃತ್ತಿಯಾದ ಬಳಿಕ ಮತ್ತೆ ಇದೇ ಕೃಷಿ ವೃತ್ತಿ ಮುಂದುವರಿಸಿದ್ದೇನೆ. ಹಾಗಾಗಿ, ಲಾಭವಿಲ್ಲ, ನಷ್ಟವಾಗಿದೆ ಎಂದು ಯಾವ ರೈತರೂ ಕೈ ಚೆಲ್ಲಿ ಕುಳಿತುಕೊಳ್ಳಬಾರದು. ಮರಳಿ ಪ್ರಯತ್ನವ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದು ಪ್ರಕಾಶ ಕುಲಕರ್ಣಿ ಅವರ ಅಭಿಪ್ರಾಯ.
ನನ್ನ ನೌಕರಿ ಅವಧಿಯಲ್ಲಿ ದಿನಕ್ಕೆ 10-12 ಗಂಟೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಈಗ ಹೊಲದಲ್ಲಿ 2 ಗಂಟೆ ಅಷ್ಟೇ ಕೆಲಸ. ಯಾರ ಕಿರುಕುಳ ಇಲ್ಲದೇ ಆರಾಮವಾಗಿ ಮಾಡಬಹುದು. ಆರೋಗ್ಯ ದೃಷ್ಟಿಯಲ್ಲೂ ಒಳ್ಳೆಯದಾಗಿದೆ. ಸುಗಂಧರಾಜ ಬೆಳೆದು ನಮ್ಮ ಜೀವನ ಕೂಡ ಸುಗಂಧರಾಜನಂತೆ ಆಗಿದ್ದು, ಹಸನ್ಮುಖಿ ಬದುಕಾಗಿದೆ. 2 ಲಕ್ಷ ರೂ. ಕಾರು ಲೋನ್ ತೀರಿಸಿದ್ದೇನೆ. ನಮಗೆ ಯಾವುದೇ ಆರ್ಥಿಕ ಬಾಧೆಯೂ ಕಾಡುತ್ತಿಲ್ಲ ಎನ್ನುತ್ತಾರೆ ಪ್ರಕಾಶ ಕುಲಕರ್ಣಿ.
ಸರ್ಕಾರಿ ನೌಕರಿಗೆ ಸಮ:ಈಗ ಎಲ್ಲರೂ ಸರ್ಕಾರಿ ನೌಕರಿಯನ್ನೇ ಹಿಡಿಯಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ, ಕೃಷಿಯಲ್ಲೂ ಸರ್ಕಾರಿ ನೌಕರಿ ಸಂಬಳದಷ್ಟೇ ಆದಾಯಗಳಿಸಬಹುದು ಎಂಬುದನ್ನು ರೈತ ಪ್ರಕಾಶ ನಿರೂಪಿಸಿದ್ದಾರೆ. ಯಾಕೆಂದರೆ ನಿವೃತ್ತಿ ಸಂದರ್ಭದಲ್ಲಿ 60 ಸಾವಿರ ರೂ. ವೇತನ ಪಡೆದಿರುವ ಅವರು, ಈಗ ಸುಗಂಧರಾಜ ಬೆಳೆದು ಒಂದು ವರ್ಷದಲ್ಲಿ 6 ಲಕ್ಷಗಳಿಸಿದ್ದಾರೆ. ತಿಂಗಳಿಗೆ ಲೆಕ್ಕ ಹಾಕಿದರೆ 50 ಸಾವಿರ ರೂ. ಆಗುತ್ತದೆ. ಅದರಲ್ಲೂ ಯಾವುದೇ ಒತ್ತಡ, ಯಾರ ಕಿರುಕುಳ ಇಲ್ಲದೇ ಎಂಬುದನ್ನು ಗಮನಿಸಬೇಕಾದ ಸಂಗತಿ.
ಕಾದ್ರೊಳ್ಳಿ ಪಿ.ಕೆ.ಪಿ.ಎಸ್ ಮಾಜಿ ಅಧ್ಯಕ್ಷ ವಿಠಲ ಹೈಬತ್ತಿ ಮಾತನಾಡಿ, "ಇಂದು ಅದೇಷ್ಟೋ ಜನರು ಕೃಷಿ ಕಾಯಕ ಕೈ ಬಿಟ್ಟು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ, ಪ್ರಕಾಶ ಕುಲಕರ್ಣಿ ಅವರು ನಿವೃತ್ತಿ ಬಳಿಕ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು, ವಿಭಿನ್ನ ತಳಿಯ ಸುಗಂಧರಾಜ ಹೂವನ್ನು ಕೇವಲ 30 ಗುಂಟೆಯಲ್ಲಿ ಬೆಳೆದು, 6 ಲಕ್ಷ ಆದಾಯ ಗಳಿಸಿದ್ದಾರೆ. ಇವರ ಕೃಷಿ ಪದ್ಧತಿ ನಮಗೂ ಪ್ರೇರಣೆಯಾಗಿದ್ದು, ನಾವು ಕೂಡ ಇವರ ಹಾದಿಯಲ್ಲಿ ನಡೆಯಬೇಕೆಂದು ಯೋಚಿಸುತ್ತಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ:ಸುಗಂಧ ಬೀರುವ ಈ ಮರದ ತುಂಡುಗಳಿಗಿದೆ ಕೆಜಿಗೆ ಲಕ್ಷ ಲಕ್ಷ ಬೆಲೆ: ಈ ಮರದ ಸಸಿ ನೆಟ್ಟು, 4ವರ್ಷದಲ್ಲಿ ಗಳಿಸಿ ಕೋಟಿ ಕೋಟಿ ಆದಾಯ!