ಬೆಂಗಳೂರು: "ಲಿಬಿಯಾ ದೇಶದಲ್ಲಿ ನೆಲೆಸಿದ್ದ ಅನಿವಾಸಿ ಕನ್ನಡಿಗರು ಅಲ್ಲಿ ತಲೆದೋರಿದ ಆಂತರಿಕ ಬಿಕ್ಕಟ್ಟಿನಿಂದಾಗಿ ವಾಪಾಸು ತಾಯ್ನಾಡಿಗೆ ಬಂದು ಉದ್ಯೋಗ ಕಳೆದುಕೊಂಡು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಭಾರತೀಯರು ಲಿಬಿಯಾಗೆ ತೆರಳುವ ನಿರ್ಬಂಧವನ್ನು ಸಡಿಲಿಸಲಾಗಿದೆ" ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, "ಭಾರತೀಯರ ಜೀವ ಮತ್ತು ಜೀವನದ ಹಿತದೃಷ್ಟಿಯಿಂದ ಭಾರತ ಸರ್ಕಾರವು ಭಾರತೀಯರು ಲಿಬಿಯಾ ದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿತ್ತು. ಆದರೆ ನಿರ್ಬಂಧ ಚಾಲ್ತಿಯಲ್ಲಿದ್ದ ಕಾರಣ ಲಿಬಿಯಾ ದೇಶದಲ್ಲಿ ಸಮಸ್ಯೆ ತಿಳಿಯಾದರೂ ಭಾರತೀಯರು ಅದರಲ್ಲೂ ಕನ್ನಡಿಗರು ಮತ್ತೆ ಲಿಬಿಯಾ ದೇಶಕ್ಕೆ ತೆರಳಿ ತಮ್ಮ ಉದ್ಯೋಗ ಅಥವಾ ವ್ಯವಹಾರವನ್ನು ಮುಂದುವರೆಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರವನ್ನು ಕೋರಲಾಗಿತ್ತು. ಈ ಹಿನ್ನೆಲೆ ಇದೀಗ ಭಾರತೀಯರು ಲಿಬಿಯಾಗೆ ತೆರಳಲು ನಿರ್ಬಂಧ ಸಡಿಲಿಸಲಾಗಿದೆ" ಎಂದು ತಿಳಿಸಿದರು.
ಭಾರತೀಯರು ಅನೇಕ ವರ್ಷಗಳಿಂದ ಪ್ರಪಂಚದ ವಿವಿಧ ದೇಶಗಳಿಗೆ ಕೆಲಸ ಅರಸಿ ವಲಸೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ. ಈ ಪೈಕಿ ಕೌಶಲ್ಯ ಹೊಂದಿದ ಹಾಗೂ ಕೌಶಲ್ಯ ರಹಿತ ಕೆಲಸಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ಹಾಗೂ ಕೆಳವರ್ಗಕ್ಕೆ ಸೇರಿದವರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿರುವ ನಿರುದ್ಯೋಗಿ ಯುವಜನಾಂಗ ಬದುಕನ್ನು ಕಟ್ಟಿಕೊಳ್ಳುವ ಕನಸಿನೊಂದಿಗೆ ಅನೇಕ ದೇಶಗಳಲ್ಲಿ ಪ್ರತಿಕೂಲ ಕೆಲಸದ ವಾತಾವರಣವಿದ್ದರೂ ಕೂಡ ಕೆಲಸವನ್ನರಸಿ ಹೋಗುತ್ತಿರುವುದು ತಿಳಿದ ವಿಷಯ.
"ಈ ರೀತಿ ಸಾವಿರಾರು ಭಾರತೀಯರು ಆಫ್ರಿಕಾ ಖಂಡದಲ್ಲಿರುವ ಲಿಬಿಯಾ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನದ ಕಂಪನಿಗಳಲ್ಲಿ ಕೆಲಸ ನಿರ್ವಹಿಸಲು ಅನೇಕ ವರ್ಷಗಳಿಂದ ನೆಲೆಸಿದ್ದಾರೆ. ಆದರೆ 2011ರಲ್ಲಿ ನಡೆದ ಆಂತರಿಕ ರಾಜಕೀಯ ಸಂಘರ್ಷದಿಂದಾಗಿ ಸುಮಾರು 18 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ವಾಪಾಸು ಕರೆತರಲಾಗಿತ್ತು. 2014ರಲ್ಲಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಾಗ ಸುಮಾರು 4 ಸಾವಿರ ಜನರನ್ನು ಕರೆತರಲಾಗಿತ್ತು." ಎಂದು ತಿಳಿಸಿದರು.
"ಆದರೆ ತದನಂತರವೂ ಕೂಡ ಲಿಬಿಯಾದಲ್ಲಿ ಐಸಿಸ್ ಉಗ್ರರು ಮತ್ತು ಸರ್ಕಾರದ ನಡುವೆ ಆಂತರಿಕ ಸಂಘರ್ಷ ಮುಂದುವರೆದಿತ್ತು. 2016ರಲ್ಲಿ ಎರಡೂ ಬಣಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಮೂಲದ ದಾದಿಯೊಬ್ಬರು ಮರಣಹೊಂದಿದ್ದರು. ಆ ಕೂಡಲೇ ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯವು 2016 ರ ಮೇ 23ರಂದು ಆದೇಶವನ್ನು ಹೊರಡಿಸಿ ಭಾರತೀಯರು ಯಾವುದೇ ಉದ್ದೇಶಗಳಿಗಾಗಿ ಲಿಬಿಯಾ ದೇಶಕ್ಕೆ ಪ್ರವಾಸ ಕೈಗೊಳ್ಳದಂತೆ ನಿರ್ಬಂಧವನ್ನು ಹೇರಿತ್ತು. ನಂತರದ ದಿನಗಳಲ್ಲಿ ಅಲ್ಲಿನ ಪ್ರಕ್ಷುಬ್ದ ವಾತಾವರಣವು ತಿಳಿಗೊಂಡ ಬಳಿಕ ಅಲ್ಲಿ ನೆಲೆಸಿದ್ದ ಭಾರತೀಯರು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಹಾಗೂ ರಾಜಕೀಯ ಮುಖಂಡರುಗಳ ಮೂಲಕ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಲು ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ" ಎಂದರು.