ಬೋರ್ವೆಲ್ನಿಂದ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ವಿಜಯಪುರ:ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನ ಕೊಳವೆ ಬಾವಿಗೆ ಬಿದ್ದಿರುವ ಎರಡು ವರ್ಷದ ಬಾಲಕನ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸಾತ್ವಿಕ್ ಮುಜಗೊಂಡ (2) ರಕ್ಷಣೆಗೆ ಸತತ 12 ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.
ಸತೀಶ ಮುಜಗೊಂಡ ಹಾಗೂ ಪೂಜಾ ಮುಜಗೊಂಡ ಎಂಬುವರ ಪುತ್ರ ಸಾತ್ವಿಕ್ ಬುಧವಾರ ಸಂಜೆ ವೇಳೆಗೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ಬಾಲಕನ ರಕ್ಷಣೆಗೆ ನಿನ್ನೆ ಸಂಜೆ 6 ಗಂಟೆಯಿಂದಲೇ ಕಾರ್ಯಾಚರಣೆ ಶುರುವಾಗಿದ್ದು, ರಕ್ಷಣಾ ತಂಡವು ಸುಮಾರು 20 ಅಡಿಗಳಷ್ಟು ಡಿಗ್ಗಿಂಗ್ ಮಾಡಿದೆ. ಅಲ್ಲಿಂದ ಬಾಲಕ ಇರುವ ಕಡೆಗೆ 5 ಅಡಿಗಳಷ್ಟು ಸುರಂಗ ಕೊರೆಯಲಾಗುತ್ತಿದೆ. ಈಗಾಗಲೇ ಅಡ್ಡಡ್ಡ 3 ಅಡಿಗಳಷ್ಟು ಸುರಂಗ ಮಾಡಲಾಗಿದೆ. ಆದರೆ, ಕಾರ್ಯಾಚರಣೆಗೆ ಗಟ್ಟಿಯಾದ ಕಲ್ಲು ಬಂಡೆಗಳು ಅಡ್ಡಿಯಾಗುತ್ತಿವೆ. ಬಂಡೆಗಳನ್ನು ಬ್ರೇಕ್ ಮಾಡುತ್ತ ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಮುಜಗೊಂಡ ದಂಪತಿಯು ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು, ಲಿಂಬೆ ಬೆಳೆಯಲು ಕೊಳವೆಬಾವಿ ಕೊರೆಸಿದ್ದರು. ಈಗಾಗಲೇ ಮಗುವಿನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಸ್ಥಳದಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದ ವೈದ್ಯರ ತಂಡ ಕರ್ತವ್ಯದಲ್ಲಿ ತೊಡಗಿದೆ. ಆಂಬ್ಯುಲೆನ್ಸ್ ಕೂಡ ಇರಿಸಿಕೊಳ್ಳಲಾಗಿದೆ. ಸಾತ್ವಿಕ್ ಬದುಕಿ ಬರಲೆಂದು ಪೂಜೆ, ಪುನಸ್ಕಾರ ನಡೆಯುತ್ತಿವೆ. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಯಲ್ಲಿಯೂ ಗ್ರಾಮದ ಯುವಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
ಸ್ಥಳೀಯ ಅಗ್ನಿಶಾಮಕ ದಳ, ಬೆಳಗಾವಿ, ಕಲಬುರಗಿ ಹಾಗೂ ಹೈದರಾಬಾದ್ನಿಂದ ಆಗಮಿಸಿರುವ ಎಸ್ಡಿಆರ್ಎಫ್ ತಂಡಗಳು, ಕೊಳವೆ ಬಾವಿ ಕೊರೆಯುವ ನುರಿತ ತಂಡಗಳಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಕಾರ್ಯಕ್ಕೆ ಎರಡು ಹಿಟಾಚಿ, ಬ್ರೇಕರ್‌ಗಳು ಹಾಗೂ ಟ್ರ್ಯಾಕ್ಟರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಕಾರ್ಯಾಚರಣೆ ನೋಡಲು ಜನರು ಕಿಕ್ಕಿರಿದು ಸೇರಿದ್ದಾರೆ.
ಇದನ್ನೂ ಓದಿ: ವಿಜಯಪುರ: ಜಮೀನಿನಲ್ಲಿ ಆಟವಾಡಲು ಹೋಗಿ ಕೊಳವೆ ಬಾವಿಗೆ ಬಿದ್ದ ಬಾಲಕ, ಮುಂದುವರೆದ ರಕ್ಷಣಾ ಕಾರ್ಯ