ರಾಯಚೂರು: ಶಾಸಕ ಡಾ. ಶಿವರಾಜ್ ಪಾಟೀಲ್ ವಿವಾಹ ಸಮಾರಂಭಕ್ಕೆ ತೆರಳಿದ ವೇಳೆ ಅನುಚಿತ ವರ್ತನೆ ತೋರಿದ ವ್ಯಕ್ತಿಯೋರ್ವನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಬಳಿಕ ವರದಿ ನೀಡುವುದಾಗಿ ತಿಳಿಸಿದ್ದಾರೆ. "ಈ ಬಗ್ಗೆ ಸೂಕ್ತ ತನಿಖೆ ಮಾಡಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ" ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ನಗರದ ಗದ್ವಾಲ್ ರಸ್ತೆಯಲ್ಲಿ ಶನಿವಾರ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದ ಸಂದರ್ಭ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಮುಂದೆ ವ್ಯಕ್ತಿಯೋರ್ವ ಅನುಚಿತ ವರ್ತನೆ ತೋರಿದ್ದಾನೆ ಎನ್ನುವ ಆರೋಪ ಕೇಳಿ ಬಂದಿತ್ತು.
ಈ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾಸಕರು, "ಮದುವೆ ಸಮಾರಂಭಕ್ಕೆ ಹೋದಾಗ ವ್ಯಕ್ತಿಯೋರ್ವ ನಾನು ಕಾರಿನಿಂದ ಇಳಿಯುತ್ತಿದ್ದಂತೆ ಹತ್ತಿರ ಬಂದಿದ್ದ. ಆಗ ವ್ಯಕ್ತಿ ಕುಡಿದಿರುವುದು ಗೊತ್ತಾಗಿ, ಅಂಗರಕ್ಷಕರು, ಮುಖಂಡರು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಆ ವ್ಯಕ್ತಿಯ ಬಳಿ ಚೂರಿ ಇತ್ತು ಅಂತ ಬೆಂಬಲಿಗರು ಹೇಳಿದ್ರು. ನಮ್ಮ ಬೆಂಬಲಿಗರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಮ್ಮ ತಂಡದವರು ವಿಚಾರಿಸಿದಾಗ, ಆ ವ್ಯಕ್ತಿ ಮದ್ಯ ವ್ಯಸನಿಯಾಗಿದ್ದ, ಮನೆಯಲ್ಲಿ ಹೆಂಡತಿ, ಮಕ್ಕಳಿಗೆ ಹಿಂಸೆ ಕೊಡುತ್ತಿದ್ದ ಎನ್ನುವುದು ಸ್ಥಳೀಯರಿಂದ ಗೊತ್ತಾಯಿತು. ಭಾನುವಾರ ಎಸ್ಪಿ ಕರೆ ಮಾಡಿ ವಿಚಾರಿಸಿದ್ದರು. ವ್ಯಕ್ತಿ ಕುಡಿದ ಅಮಲಿನಲ್ಲಿ ಆ ರೀತಿ ಮಾಡಿರಬಹುದು. ಆದರೂ ಈ ಬಗ್ಗೆ ಎಲ್ಲಾ ಆ್ಯಂಗಲ್ನಿಂದಲೂ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ವರದಿ ಕೊಡುತ್ತೇವೆ ಎಂದು ಎಸ್ಪಿ ಹೇಳಿದ್ದಾರೆ. ಅಂತಹ ದೊಡ್ಡ ಘಟನೆಯೇನಲ್ಲ ಅಂತ ನನಗನಿಸುತ್ತದೆ. ಕುಡಿತದ ಚಟದಿಂದ ಆ ರೀತಿ ಮಾಡಿದ್ದಾನೆ ಎಂದು ನಾನು ಭಾವಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.