ಬೆಂಗಳೂರು:ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ, ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸಿಎಂ ನಿವಾಸ ಕಾವೇರಿಯಲ್ಲಿಂದು ಭೇಟಿಯಾದ ನಿಯೋಗ, ಸಿಎಂಗೆ ಮನವಿ ಪತ್ರ ಸಲ್ಲಿಸಿದರು. ನಿಯೋಗದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ಎಂ.ಸಿ.ಸುಧಾಕರ್, ಶರತ್ ಬಚ್ಚೇಗೌಡ, ಮಾಗಡಿ ಬಾಲಕೃಷ್ಣ, ಮಾಲೂರು ಮಂಜೇಗೌಡ, ಕುಣಿಗಲ್ ರಂಗನಾಥ್, ಎಸ್.ರವಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, "ಮುನಿರತ್ನ ವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಪಡೆದು ಮತ್ತಷ್ಟು ಕ್ರಮ ಆಗಬೇಕು ಅಂತ ಸಿಎಂಗೆ ಮನವಿ ಮಾಡಿದ್ದೇವೆ. ಮುನಿರತ್ನ ಇಲ್ಲಸಲ್ಲದ ಟ್ವೀಟ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತಿದ್ದಾರೆ. ಬಿಬಿಎಂಪಿಯಲ್ಲಿ ದಾಖಲೆ ಸುಟ್ಟು ಹಾಕಿದ ಇತಿಹಾಸ ಇದೆ. ಅಂತಹದರಲ್ಲಿ ಮುನಿರತ್ನ ನಿಸ್ಸೀಮರು. ಕಾನೂನು ವ್ಯಾಪ್ತಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಕ್ಕೆ ಅವಕಾಶ ಕೊಡದಂತೆ ಸಿಎಂಗೆ ಮನವಿ ಮಾಡಿದ್ದೇವೆ. ನ್ಯಾಯಾಂಗದಲ್ಲಿ ಸರ್ಕಾರ ಗಟ್ಟಿಯಾಗಿ ಕೆಲಸ ಮಾಡಬೇಕು. ಸರ್ಕಾರಿ ವಕೀಲರು ದಾಖಲಾತಿ ಸಮೇತ ಅವರ ವಿರುದ್ಧ ವಾದ ಮಾಡಿ ಶಿಕ್ಷೆ ಕೊಡಿಸಬೇಕು. ಈ ಕೇಸ್ನಲ್ಲಿ ಹೆಚ್ಚು ಗಮನಕೊಡುವಂತೆ ಮನವಿ ಮಾಡಿದ್ದೇವೆ" ಎಂದರು.
ಮುಂದುವರೆದು, "ಪ್ರತ್ಯೇಕ ತನಿಖೆ ತಂಡದಿಂದ ತನಿಖೆ ಮಾಡಲು ಮನವಿ ಮಾಡಿದ್ದೇವೆ. SIT, ಲೋಕಾಯುಕ್ತದಿಂದ ತನಿಖೆ ಮಾಡೋಕೆ ಸಾಧ್ಯನಾ ಅಂತ ಪರಿಶೀಲನೆ ಮಾಡೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಮುನಿರತ್ನ ಶಾಸಕನಾಗಲು ಅನರ್ಹ. ಚುನಾವಣೆಗೆ ನಿಲ್ಲಲು ಕನಿಷ್ಠ ಅರ್ಹತೆ ಬೇಕು. ಆದರೆ ಅದು ಅವರಲ್ಲಿಲ್ಲ" ಎಂದರು.
ಅವರು ನಿಮ್ಮ ಪಕ್ಷದಲ್ಲಿದ್ದವರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ, "ಮಗು ಹುಟ್ಟುತ್ತದೆ. ತಂದೆ-ತಾಯಿ ಬೆಳೆಸುತ್ತಾರೆ. ವಾತಾವರಣ ಸರಿ ಇದ್ದರೂ ಕೂಡಾ ಹುಟ್ಟುಗುಣ ಹಾಗೇ ಇರುತ್ತೆ. ಶಾಸಕನಾದ ನಂತರ ಅವರ ಬಣ್ಣ ಬಯಲಾಗಿದೆ. ಮುನಿರತ್ನ ವಿರುದ್ಧ ಮಹಿಳೆಯ ಸೀರೆ ಎಳೆದ ಕೇಸ್ ಸೇರಿ ಅನೇಕ ಕೇಸ್‌ಗಳಿವೆ. ಅವರ ಗ್ರಹಚಾರ ಕೆಟ್ಟಿದೆ. ಬಿಜೆಪಿ ಮುನಿರತ್ನ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಕುಮಾರಸ್ವಾಮಿ, ಅಶೋಕ್, ರವಿ, ಅಮಿತ್ ಶಾ, ಮೋದಿ ಬಳಿ ಹೋಗಿ ಕ್ರಮಕ್ಕೆ ಒತ್ತಾಯ ಮಾಡಲಿ. ಇಲ್ಲದೇ ಹೋದರೆ ಇವರನ್ನು ಸಮಾಜ ವಿರೋಧಿ ಎನ್ನಬೇಕಾಗುತ್ತದೆ. ಮೂವರು ಮುನಿರತ್ನ ಪರ ಮಾತಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಬೇಕು" ಎಂದು ಒತ್ತಾಯಿಸಿದರು.
ನಾಗಮಂಗಲ ಘಟನೆ ಮುಚ್ಚಿ ಹಾಕೋಕೆ ಸರ್ಕಾರ ಮುನಿರತ್ನ ವಿಷಯ ದೊಡ್ಡದು ಮಾಡಲು ಮುಂದಾಗಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ನಾಗಮಂಗಲದಲ್ಲಿ ಹಿಂದೂಗಳು-ಮುಸ್ಲಿಮರು ಒಟ್ಟಾಗಿ ಗಣೇಶ ಬಿಟ್ಟಿದ್ದಾರೆ. ಬಿಜೆಪಿಯವರಿಗೆ ಇಷ್ಟು ಬೇಗ ಇದು ಮುಗಿದು ಹೋಯ್ತು ಅಂತ ಬೇಸರ ಇದೆ. ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಾಗಿ ಇದ್ದಾರೆ. ಸಣ್ಣ ಪುಟ್ಟ ಗೊಂದಲ ಮಾಡೋರು ಬೇರೆ ಇದ್ದಾರೆ ಬಿಟ್ಟರೆ ಈಗ ಎಲ್ಲರೂ ಒಂದಾಗಿದ್ದಾರೆ. ಬಿಜೆಪಿ ಅವರು ಇದಕ್ಕೆ ಸಂತೋಷಪಡೋದು ಬಿಟ್ಟು ಸಮಿತಿ ಕಳಿಸಿದ್ದಾರೆ. ಇದಕ್ಕೇನು ಹೇಳೋಣ?. ಕೆರಗೋಡು, ನಾಗಮಂಗಲ ಕೇಸ್ ಪ್ರಯತ್ನ ಫೇಲ್ ಆಯ್ತು ಅಂತ ಬಿಜೆಪಿ ಅವರಿಗೆ ರಾತ್ರಿ ನಿದ್ರೆ ಇಲ್ಲವಂತೆ. ಇದನ್ನು ಬಿಟ್ಟು ಬೇರೆ ರಾಜಕೀಯ ಮಾಡಲಿ ಎಂದು ಟಾಂಗ್ ಕೊಟ್ಟರು.
ಸಿಎಂ ಸಿದ್ದರಾಮಯ್ಯ ಭೇಟಿಯ ಬಳಿಕ ಮಾತನಾಡಿದ ಸಚಿವ ಎಂ.ಸಿ ಸುಧಾಕರ್, "ಮುನಿರತ್ನ ಅವರು ಮಾತನಾಡಿರುವ ಆಡಿಯೋ ಬಂದಿದೆ. ಅದರಲ್ಲಿ ಒಕ್ಕಲಿಗ ಹಾಗೂ ದಲಿತರ ಕುರಿತಾಗಿ ಮಾತನಾಡಿರುವುದು ಖಂಡನೀಯ. ಅದು ಬಹಳಷ್ಟು ನೋವು ಉಂಟು ಮಾಡಿದೆ. ಸರ್ಕಾರ ಅವರನ್ನು ಬಂಧಿಸುವ ಕೆಲಸ ಮಾಡಿದೆ. ಇದೀಗ ಒಂದು ಆಡಿಯೋ ಮಾತ್ರ ಬೆಳಕಿಗೆ ಬಂದಿದೆ. ಈ ಹಿಂದೆ ಹಲವು ಬಾರಿ ಈ ರೀತಿ ಮಾತನಾಡಿದ್ದಾರೆ" ಎಂದು ಆರೋಪಿಸಿದರು.
ಹನುಮಂತರಾಯಪ್ಪ ಆಡಿಯೋ ವೈರಲ್ ವಿಚಾರವಾಗಿ, "ಹನುಮಂತರಾಯಪ್ಪ ಆಡಿಯೋ ನಾನು ಕೇಳಿದ್ದೇನೆ. ಅವರೇನು ತಪ್ಪಾಗಿ ಮಾತಾಡಿಲ್ಲ. ಗುತ್ತಿಗೆಯಲ್ಲಿ ಆಗಿರುವ ಸಮಸ್ಯೆ ಪರಿಹಾರ ಮಾಡೋದಾಗಿ ಮಾತ್ರ ಹೇಳಿದ್ದಾರೆ. ಇದಕ್ಕೂ ಮುನಿರತ್ನ ಮಾತಾಡಿರೋದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಾಟ ಸಮಗ್ರ ತನಿಖೆಯಾಗಬೇಕು : ಸಿ.ಟಿ. ರವಿ - MLC C T RAVI