ಕರ್ನಾಟಕ

karnataka

ETV Bharat / state

ಕಾಲುವೆಯ ನೀರಿನಲ್ಲಿ ಕೊಚ್ಚಿಹೋಗಿ ಬಾಲಕ ಸಾವು ಪ್ರಕರಣ: ಎಚ್ಚೆತ್ತುಕೊಂಡ ಜಿಲ್ಲಾಡಳಿತದಿಂದ ದುರಸ್ತಿ ಕಾರ್ಯ

ಬಾಲಕ ಕೊಚ್ಚಿಹೋಗಿ ಸಾವನ್ನಪ್ಪಿದ ಕಾಲುವೆಯಲ್ಲಿ ಹೆಚ್ಚಿನ ಅನಾಹುತವಾಗದಂತೆ ಹಾವೇರಿ ಜಿಲ್ಲಾಡಳಿತ ದುರಸ್ತಿ ಕಾರ್ಯ ಕೈಗೊಂಡಿದೆ.

By ETV Bharat Karnataka Team

Published : 4 hours ago

ಹಾವೇರಿ ಜಿಲ್ಲಾಡಳಿತದಿಂದ ಕಾಲುವೆ ದುರಸ್ಥಿ ಕಾರ್ಯ
ಹಾವೇರಿ ಜಿಲ್ಲಾಡಳಿತದಿಂದ ಕಾಲುವೆ ದುರಸ್ಥಿ ಕಾರ್ಯ (ETV Bharat)

ಹಾವೇರಿ: ಕಾಲುವೆಯ ನೀರಿನಲ್ಲಿ ಬಾಲಕ ಕೊಚ್ಚಿಹೋಗಿ ಸಾವನ್ನಪ್ಪಿದ ಘಟನೆಯಿಂದ ಹಾವೇರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಗುರುವಾರ ಮುಂಜಾನೆ 12 ವರ್ಷದ ಬಾಲಕ ನಿವೇದನ ಬಸವರಾಜ್ ಗುಡಗೇರಿ ಕೊಚ್ಚಿಹೋಗಿ ಸಾವನ್ನಪ್ಪಲು ಕಾರಣವಾದ ಕಾಲುವೆಯಲ್ಲಿ ಹೆಚ್ಚಿನ ಅನಾಹುತವಾಗದಂತೆ ದುರಸ್ತಿ ಕಾರ್ಯ ಕೈಗೊಂಡಿದೆ.

ಶುಕ್ರವಾರ ಮುಂಜಾನೆಯಿಂದಲೇ ಜೆಸಿಬಿ ಸಹಾಯದಿಂದ ಹಾವೇರಿ ನಗರದ ನೀರಿನ ಅವಘಡಗಳಿಗೆ ಕಾರಣವಾಗಿರುವ ಹಳೇ ಪಿಬಿ ರಸ್ತೆಯ ಅಕ್ಕಪಕ್ಕದ ಕಾಲುವೆಗಳ ಮೇಲೆ ಕಲ್ಲು ಹಾಕಿಸುವ ಕಾರ್ಯ ಮಾಡಲಾಯಿತು. ಕೆಲವು ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಎಚ್ಚರಿಕೆಯ ಫಲಕ ಹಾಕಲಾಗಿದೆ. ಈ ಮಧ್ಯೆ ರಾಜಕಾಲುವೆಯ ಒತ್ತುವರಿಯ ತೆರವಿಗೆ ಹಾವೇರಿ ನಗರಸಭೆ ಮುಂದಾಗಿದೆ. ರಾಜಕಾಲುವೆ ಹಾದು ಹೋಗಿರುವ ಕಡೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು. ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮತ್ತು ನಗರಸಭೆ ಸದಸ್ಯೆ ಚೆನ್ನಮ್ಮ ರಾಜಕಾಲುವೆ ಸ್ವಚ್ಛತೆ ಕಾರ್ಯದ ನೇತೃತ್ವ ವಹಿಸಿದ್ದರು.

ಹಾವೇರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ , ನಗರಸಭೆ ಸದಸ್ಯೆ ಚೆನ್ನಮ್ಮ ಹೇಳಿಕೆಗಳು. (ETV Bharat)

ರಾಜಕಾಲುವೆಗಳ ಒತ್ತುವರಿ ಆರೋಪ:"ಹಾವೇರಿ ನಗರದಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿದೆ ಎಂಬ ಆರೋಪ ಬಹಳ ದಿನಗಳಿಂದ ಕೇಳಿಬರುತ್ತಿದೆ. ನಾನು ಅಧಿಕಾರ ಸ್ವೀಕರಿಸಿ ಈಗ 45 ದಿನಗಳಾಗಿವೆ. ನಗರದಲ್ಲಿನ ರಾಜಕಾಲುವೆಗಳ ಮೇಲೆ ಪ್ರಭಾವಿ ನಾಯಕರು ಮನೆಗಳನ್ನು ಕಟ್ಟಿಕೊಂಡು, ಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ನನ್ನ ಅಧಿಕಾರಾವಧಿಯಲ್ಲಿ ಕ್ರಮ ತಗೆದುಕೊಳ್ಳುತ್ತೇನೆ. ಗುರುವಾರ ಸಂಭವಿಸಿದಂತ ಅನಾಹುತ ನಗರದಲ್ಲಿ ಮತ್ತೆ ಸಂಭವಿಸಬಾರದು. ಆ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದಾಗಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ತಿಳಿಸಿದ್ದಾರೆ.

"2021 ರಲ್ಲಿ ಸಹ ಹಳೇ ಪಿಬಿ ರಸ್ತೆಯಲ್ಲಿ ವ್ಯಕ್ತಿಯೊರ್ವ ಕೊಚ್ಚಿಹೋಗಿ ಸಾವನ್ನಪ್ಪಿದ್ದ. ಮಳೆಗಾಲ ಬಂದರೆ ಸಾಕು ಶಿವಾಜಿನಗರದ ಜನ ಆತಂಕದಲ್ಲಿ ದಿನಕಳೆಯಬೇಕಾಗುತ್ತದೆ. ಮೂರ್ನಾಲ್ಕು ದಶಕದ ಸಮಸ್ಯೆ ಇದಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಶಿವಾಜಿನಗರದಲ್ಲಿ ಸಮರ್ಪಕ ಚರಂಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇನೆ. ಅಲ್ಲದೇ ನಗರೋತ್ಥಾನ ಯೋಜನೆಯಲ್ಲಿ ಶಿವಾಜಿನಗರಕ್ಕೆ ವೈಜ್ಞಾನಿಕ ಕಾಲುವೆ ನಿರ್ಮಾಣ ಸಹ ಮಾಡಲಾಗುತ್ತದೆ. ಶಿವಾಜಿನಗರಕ್ಕೆ ಜಮೀನುಗಳಿಂದ ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೀರು ಬರುತ್ತದೆ. ಇದನ್ನು ತಡೆಗಟ್ಟಬೇಕು ಇದಕ್ಕಾಗಿ ಜಿಲ್ಲಾಡಳಿತ ನಗರಸಭೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಶಿವಾಜಿನಗರವನ್ನು ಮಳೆಗಾಲದಲ್ಲಿ ಸುರಕ್ಷಿತ ನಗರವಾಗಿಸುವ ಕಾರ್ಯ ಮಾಡುವೆ" ಎಂದು ನಗರಸಭೆ ಸದಸ್ಯೆ ಚೆನ್ನಮ್ಮ ಭರಸವೆ ನೀಡಿದ್ದಾರೆ.

ಹಾವೇರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಮಾತನಾಡಿ, "ಗುರುವಾರ 12 ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ. ಪ್ರಕರಣದ ಕುರಿತು ತನಿಖೆಯಾದ ಬಳಿಕ ಯಾರ ತಪ್ಪಿದೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ರೀತಿಯ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಸಕಲ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಸಹ ತಮ್ಮ ಮಕ್ಕಳ ಬಗ್ಗೆ ಸ್ವಲ್ಪ ಗಮನ ನೀಡಬೇಕು" ಎಂದು ಸೂಚಿಸಿದರು.

ಇದನ್ನೂ ಓದಿ:ಹಾವೇರಿ: ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿಹೋಗಿದ್ದ 12 ವರ್ಷದ ಬಾಲಕ ಸಾವು

ABOUT THE AUTHOR

...view details