ಬೆಂಗಳೂರು:ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ, ಇಲ್ಲವೇ ಮುಚ್ಚಿಬಿಡಿ ಎಂಬ ಘೋಷಣೆಗಳೊಂದಿಗೆ ಡಿಸೆಂಬರ್ 12ರಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾವು ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳು ತಾವು ಪಡೆಯುತ್ತಿದ್ದ ಆರ್ಥಿಕ ನೆರವಿನಿಂದ ವಂಚಿತವಾಗುತ್ತಿವೆ. ಅರಿವು ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಿಗುವಂತ ಆರ್ಥಿಕ ನೆರವು ಕೂಡಾ ಸಿಗುತ್ತಿಲ್ಲ. ಸಣ್ಣ ಹಿಡುವಳಿದಾರರಿಗೆ ಸಿಗುವಂತಹ ಗಂಗಾ ಕಲ್ಯಾಣ ಯೋಜನೆ ಸಂಪೂರ್ಣ ನಿಂತುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರು ಮಾತನಾಡಿದರು. (ETV Bharat) ಹಿಂದುಳಿದ ವರ್ಗಗಳ ಪರವಾಗಿರುವಂಥವರು ಎಂದು ಹೇಳಿಕೊಂಡವರು ಸಂಪೂರ್ಣವಾಗಿ ಅವರು ಹೇಳಿದ್ದ ಮಾತನ್ನೇ ಉಲ್ಲಂಘನೆ ಮಾಡಿದ್ದಾರೆ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳ ಧ್ವನಿಯಾಗಿ, ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತದ ಅನುಸಾರವಾಗಿ ಜನರ ಧ್ವನಿಯಾಗಿ ಹೋರಾಟ ಮಾಡುವ ನಿರ್ಣಯ ಅಂಗೀಕರಿಸಿದ್ದೇವೆ. ಇಡೀ ರಾಜ್ಯಾದ್ಯಂತ ಹಿಂದುಳಿದ ವರ್ಗದ ಆರ್ಥಿಕ, ಔದ್ಯೋಗಿಕ, ಅವರ ಕೃಷಿ ಚಟುವಟಿಕೆಗೆ ಸಂಬಂಧಪಟ್ಟಂತಹ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಅನುದಾನವನ್ನು ಈ ಸರ್ಕಾರ ಸ್ಥಗಿತ ಮಾಡಿದೆ ಎಂದು ಆಕ್ಷೇಪಿಸಿದರು.
ಈ ಸರ್ಕಾರವು ಹಿಂದುಳಿದವರಿಗೆ ಯಥೇಚ್ಛವಾಗಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅರ್ಜಿಗಳನ್ನು ಕರೆದು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ಕೆ ಅವಕಾಶ ಮಾಡಿಕೊಡದೆ ಇದ್ದರೆ, ಮುಂದಿನ ದಿನದಲ್ಲಿ ಹಿಂದುಳಿದ ವರ್ಗದ ಪರವಾಗಿ ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಪಕ್ಷದ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ಅವರ ಆದೇಶದ ಮೇರೆಗೆ ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಯಾವ ನೈತಿಕತೆ ಇಟ್ಟುಕೊಂಡು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು. ಹಿಂದುಳಿದ ವರ್ಗದ ಸ್ವಾಭಿಮಾನಿ ಬದುಕು, ಸ್ವಾವಲಂಬಿ ಬದುಕನ್ನು ಕಸಿದುಕೊಂಡ ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗಗಳ ಪರವಾಗಿ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ ಎಂದು ತಿಳಿಸಿದರು.
ಎಲ್ಲ ನಿಗಮಗಳು ತುಕ್ಕು ಹಿಡಿಯುತ್ತಿವೆ: ದೇವರಾಜ ಅರಸು ನಿಗಮ ಸೇರಿ ಎಲ್ಲ ಸಮುದಾಯದ ನಿಗಮಗಳಿಗೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಸಾವಿರ ಕೋಟಿ ಬಿಡುಗಡೆ ಮಾಡಿದ್ದರು. ಈಗಿನ ಸರ್ಕಾರ ನೆಪ ಮಾತ್ರಕ್ಕೆ 150 ಕೋಟಿ ಬಿಡುಗಡೆ ಮಾಡಿದೆ. ಅಂದರೆ ಹಿಂದುಳಿದ ವರ್ಗಗಳ ಎಲ್ಲ ಸಮುದಾಯದ ನಿಗಮಗಳಿಗೆ ಕೊಡುವ ಹಣವು ಪಂಚ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆಯಾಗಿದೆ ಎಂದು ಅವರು ಆರೋಪಿಸಿದರು. ಹಿಂದುಳಿದ ಅಭಿವೃದ್ಧಿ ನಿಗಮಗಳ ಕಚೇರಿಗಳು ಖಾಲಿಯಾಗಿವೆ. ಎಲ್ಲ ನಿಗಮಗಳು ತುಕ್ಕು ಹಿಡಿಯುತ್ತಿವೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ :ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಬಿಡುಗಡೆ ಆಗದೇ ಇರಬಹುದು, ಸ್ಥಗಿತ ಆಗಲು ಸಾಧ್ಯವಿಲ್ಲ : ಸಚಿವ ಹೆಚ್ ಸಿ ಮಹದೇವಪ್ಪ - Backward Classes Department grants