ಚಿಕ್ಕಮಗಳೂರು :ಕಳೆದ ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯ ಕೋರ್ಟ್ ಆದೇಶದಂತೆ ಫೆಬ್ರವರಿ 28ರಂದು ನಡೆಯಲಿದೆ. ಜಿಲ್ಲಾಡಳಿತವು ನಗರದ ಐಡಿಎಸ್ಜಿ ಕಾಲೇಜನಲ್ಲಿ ನಡೆಯುವ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತ ಎಣಿಕೆ ಸಮಯದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಹಾಜರಿರುವಂತೆ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಎ. ವಿ. ಗಾಯತ್ರಿ ಶಾಂತೇಗೌಡ, ಬಿಜೆಪಿಯಿಂದ ಎಂ. ಕೆ. ಪ್ರಾಣೇಶ್, ಆಮ್ ಆದ್ಮ ಪಕ್ಷದಿಂದ ಡಾ. ಕೆ. ಸುಂದರಗೌಡ, ಪಕ್ಷೇತರರಾಗಿ ಬಿ. ಟಿ. ಚಂದ್ರಶೇಖರ ಹಾಗೂ ಜಿ. ಐ. ರೇಣುಕುಮಾರ ಸ್ಪರ್ಧೆ ಮಾಡಿದ್ದರು. ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಮತ ಎಣಿಕೆ ನಡೆಯಲಿದೆ. ಮರು ಮತ ಎಣಿಕೆಗೆ ಚುನಾವಣಾ ಆಯೋಗದಿಂದ ಸೂಚನೆ ಬಂದಿದ್ದು, ಹೀಗಾಗಿ ದಿನಾಂಕ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ಪರಿಷತ್ಗೆ 2021ರ ಡಿಸೆಂಬರ್ 10ರಂದು ಮತದಾನ ಹಾಗೂ ಡಿಸೆಂಬರ್ 14ರಂದು ಮತ ಎಣಿಕೆ ನಡೆದಿತ್ತು. ಬಿಜೆಪಿಯ ಹಾಲಿ ಉಪ ಸಭಾಪತಿ ಎಂ. ಕೆ. ಪ್ರಾಣೇಶ್ 1,188 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಎ. ವಿ. ಗಾಯತ್ರಿ ಶಾಂತೇಗೌಡ ಅವರು 1,182 ಮತಗಳನ್ನು ಪಡೆದಿದ್ದರು. ಇದರಿಂದ, ಪ್ರಾಣೇಶ್ ಅವರು ಆರು ಮತಗಳಿಂದ ಗೆಲುವು ಸಾಧಿಸಿದ್ದರು.
ಆದರೆ, ಈ ಫಲಿತಾಂಶ ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಎ. ವಿ. ಗಾಯತ್ರಿ ಶಾಂತೇಗೌಡ ಅವರು ಕೋರ್ಟ್ ಮೆಟ್ಟಿಲೇರಿದ್ದರು. ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ವಾದಿಸಿದ್ದರು. ಈಗ ಹೈಕೋರ್ಟ್ ಈ ಕುರಿತು ಆದೇಶ ನೀಡಿದ್ದು, ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪರಿಗಣಿಸದೆ ಮರು ಮತ ಎಣಿಕೆ ಮಾಡಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟಿಗೆ ಸಲ್ಲಿಸುವಂತೆ ತಿಳಿಸಿದೆ. ಹೀಗಾಗಿ, ಫೆಬ್ರವರಿ 28ರಂದು ಮರು ಮತ ಎಣಿಕೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತೆ, ಚುನಾವಣೆ ನಡೆದರೆ ನಮ್ಮ ಸ್ಪರ್ಧೆ ಖಚಿತ : ಕುಮಾರ ಬಂಗಾರಪ್ಪ