ಬೆಂಗಳೂರು: ನಗರದ ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಸೊಂಟದಲ್ಲಿ ಗನ್ ಇಟ್ಟುಕೊಂಡು, ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿದ್ದ ಸೈಯ್ಯದ್ ರಿಯಾಜ್ನ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡು ಬಿಟ್ಟು ಕಳುಹಿಸಿದ್ದಾರೆ.
ಭದ್ರತಾ ಲೋಪದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೈಯ್ಯದ್ ರಿಯಾಜ್ ಅವರನ್ನು ವಶಕ್ಕೆ ಪಡೆದಿದ್ದ ಸಿದ್ದಾಪುರ ಠಾಣಾ ಪೊಲೀಸರು ತಡರಾತ್ರಿಯವರೆಗೂ ವಿಚಾರಣೆ ನಡೆಸಿ, ಆತನ ಹೇಳಿಕೆ ದಾಖಲಿಸಿದ್ದಾರೆ.
ಸೈಯ್ಯದ್ ರಿಯಾಜ್ ಹೇಳಿಕೆ :"ಸಾಮಾಜಿಕ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ತನಗೆ ಜೀವ ಬೆದರಿಕೆಯಿದೆ. 2019ರಲ್ಲಿ ತಮ್ಮ ಹತ್ಯೆ ಯತ್ನ ನಡೆದ ಬಳಿಕ ಗನ್ ಪರವಾನಗಿ ಪಡೆದುಕೊಂಡಿದ್ದೇನೆ. ಚುನಾವಣಾ ಸಂದರ್ಭದಲ್ಲಿಯೂ ತನ್ನ ಮೇಲೆ ದಾಳಿ ನಡೆಯಬಹುದು ಎಂಬ ಕಾರಣಕ್ಕೆ ಗನ್ ಇರಿಸಿಕೊಳ್ಳಲು ವಿನಾಯಿತಿ ಪಡೆದುಕೊಂಡಿದ್ದೆ. ಸೋಮವಾರ ನಡೆದ ರ‍್ಯಾಲಿಯಲ್ಲಿ ಮುಖ್ಯಮಂತ್ರಿಗಳ ಮುಂದೆ ಹೋಗುವ ಉದ್ದೇಶ ನನಗೆ ಇರಲಿಲ್ಲ. ಪ್ರಚಾರದ ವಾಹನ ಬಂದಾಗ ನನ್ನ ಪಾಡಿಗೆ ನಾನು ಸೈಡಲ್ಲಿ ನಿಂತು ನೋಡುತ್ತಿದ್ದೆ. ನಮ್ಮ ಆರ್.ವಿ.ದೇವರಾಜ್ ಸರ್ ನನ್ನನ್ನು ಮೇಲೆ ಕರೆದರು ಎಂದು ಹೂವಿನ ಹಾರ ಹಾಕಲು ಹೋಗಿದ್ದೆ. ಆ ಸಂದರ್ಭದಲ್ಲಿ ನನ್ನ ಸೊಂಟದಲ್ಲಿದ್ದ ಗನ್ ಆಕಸ್ಮಿಕವಾಗಿ ಕಂಡಿದೆ"ಎಂದು ಪೊಲೀಸರ ಮುಂದೆ ಸೈಯ್ಯದ್ ರಿಯಾಜ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.