ಬೆಂಗಳೂರು: ಆನ್‌ಲೈನ್ ಮೂಲಕ ಹಣ ಸ್ವೀಕರಿಸುವ ಯೋಜನೆ ಕುರಿತಂತೆ ನಿರ್ಲಕ್ಷ್ಯ ವಹಿಸಿದ್ದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಹೈಕೋರ್ಟ್ ಚಾಟಿ ಬೀಸಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ, ಆನ್ಲೈನ್ನಲ್ಲಿ ಶುಲ್ಕಗಳ ಸ್ವೀಕರಿಸುವ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಯುಪಿಐ ಅಥಾವ ಆನ್‌ಲೈನ್ ಪಾವತಿಯನ್ನು ಸೌಲಭ್ಯ ಒದಗಿಸುಲು ಈವರೆಗೂ ಅವಕಾಶವನ್ನು ಏಕೆ ಕಲ್ಪಿಸಿಲ್ಲ ಎಂಬುದರ ಕುರಿತು ವಿವರವಾದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಬೆಸ್ಕಾಂಗೆ ಹೈಕೋರ್ಟ್ ಜುಲೈ 26 ರಂದು ಸೂಚನೆ ನೀಡಿತ್ತು. ಈ ಸೂಚನೆ ಮೇರೆಗೆ ಪ್ರಮಾಣ ಪತ್ರ ಸಲ್ಲಿಸಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಮುಂದಿನ ಆರರಿಂದ ಎಂಟು ತಿಂಗಳಲ್ಲಿ ಎಲ್ಲ ರೀತಿಯ ಶುಲ್ಕಗಳ ಪಾವತಿಗೆ ಯುಪಿಐ ಅಥವಾ ಆನ್‌ಲೈನ್ ಸೌಲಭ್ಯ ಜಾರಿಗೆ ತರಲಾಗುವುದು ಎಂದು ಹೈಕೋರ್ಟ್ಗೆ ತಿಳಿಸಿದ್ದಾರೆ.
ಅಲ್ಲದೆ, ಆನ್ಲೈನ್ನಲ್ಲಿ ಶುಲ್ಕ ಸ್ವೀಕರಿಸಲು ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಅಭಿವೃದ್ಧಿ ಮಾಡಬೇಕಾಗಿದ್ದು, ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ ನವೀಕರಿಸಲಾಗಿದೆ ಎಂದು ಪ್ರಮಾಣ ಪತ್ರದದಲ್ಲಿ ವಿವರಿಸಿದ್ದಾರೆ.
ಬೆಸ್ಕಾಂ ಎಂಡಿ ಸಲ್ಲಿಸಿರುವ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ಇದನ್ನು ತಕ್ಷಣವೇ ಮಾಡುತ್ತಿದ್ದಾರೆ. ಪ್ರಮಾಣ ಪತ್ರದ ವಿವರ ನೋಡಿದರೆ ಈ ಯೋಜನೆ ಜಾರಿಗೆ ದೀರ್ಘ ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿತು.
ದೇಶದಾದ್ಯಂತ ದಿನಸಿ ವ್ಯಾಪಾರಿಯೂ ಸಹಾ ಅಂಗಡಿ ಮುಂದೆ ಸ್ಕ್ಯಾನರ್ ಹೊಂದಿದ್ದಾನೆ. ಡಿಜಿಟಲ್ ಸೇವೆಗಳನ್ನು ಜಾರಿ ಮಾಡಬೇಕು ಎಂದು ಸರ್ಕಾರ ಸೂಚಿಸುತ್ತಿದೆ. ಹೀಗಿದ್ದರೂ ನೀವು(ಬೆಸ್ಕಾಂ) ಹಿಂದಿನ ಕಾಲಕ್ಕೆ ಹೋಗಿ ನಗದು ಸಂಗ್ರಹಿಸಲು ಮುಂದಾಗುತ್ತಿದ್ದೀರಿ. ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ನ್ಯಾಯಾಲಯವು ನಿಧಾನವಾಗಿತ್ತು. ಆದರೆ ನೀವು ನಮಗಿಂತಲೂ ನಿಧಾನವಾಗಿದ್ದೀರಿ ಎಂದು ಟೀಕಿಸಿತು.
ವಿಚಾರಣೆ ವೇಳೆ ಹಾಜರಿದ್ದ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ, ಮಾಹಿತಿ ತಂತ್ರಜ್ಞಾನ(ಐಟಿ), ಕೌಂಟರ್ಗಳಲ್ಲಿ ಸ್ಕ್ಯಾನರ್ ಅನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ಒದಗಿಸಬಹುದು. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದರು. ಈ ವೇಳೆ ಅರ್ಜಿದಾರರ ಪರ ವಕೀಲರು, ಬೆಸ್ಕಾಂ ಸಲ್ಲಿಸಿದ ಆಕ್ಷೇಪಣೆಗಳಿಗೆ ಉತ್ತರಿಸಲು ಕಾಲಾವಕಾಶ ಕೋರಿದ ಹಿನ್ನೆಲೆ ಪೀಠ ಮುಂದಿನ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿತು.
ಏನಿದು ಪ್ರಕರಣ: ವಿದ್ಯುತ್ ಸರಬರಾಜು ಕೋರಿ ಹೊಸಕೋಟೆ ನಿವಾಸಿ ಸೀತಾಲಕ್ಷ್ಮೀ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿ, ಪ್ರೀಪೇಯ್ಡ್ ಮೀಟರ್ ನೀಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ 2024ರ ಮೇ 8ರಂದು ಆದೇಶಿಸಿದ್ದರು. ಅಲ್ಲದೆ, ಪ್ರೀಪೇಯ್ಡ್ ಮೀಟರ್ ಅಳವಡಿಸಲು ಆನ್‌ಲೈನ್ ಮೂಲಕ ಶುಲ್ಕ ಸ್ವೀಕರಿಸಲು ನಿರಾಕರಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸೀತಾಲಕ್ಷ್ಮೀ ಆದೇಶ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ದುರಸ್ತಿ ಕಾಮಗಾರಿ: ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿ ಮೂರು ತಿಂಗಳು ರೈಲು ನಿಲುಗಡೆ ಇಲ್ಲ - no train stop