ಮೈಸೂರು:2025ಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜನ ಕಾತುರರಾಗಿದ್ದಾರೆ. ಇನ್ನು 2024ರಲ್ಲಿ ಹಲವು ಸಿಹಿ-ಕಹಿ ಘಟನೆಗಳಿಗೆ ಮೈಸೂರು ಸಾಕ್ಷಿಯಾಗಿದೆ. ಅದರಲ್ಲಿ ಪ್ರಮುಖ ಸುದ್ದಿಗಳ ಹಿನ್ನೋಟ ಇಲ್ಲಿದೆ.
ಜಯಲಕ್ಷ್ಮಿ ವಿಲಾಸ ಅರಮನೆ ನವೀಕರಣಕ್ಕೆ ಹಣ ಮಂಜೂರು: ನಗರ ಮಾನಸ ಗಂಗೋತ್ರಿಯಲ್ಲಿರುವ ಪಾರಂಪರಿಕ ಕಟ್ಟಡವಾದ ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣೆಗೆ ಅಮೆರಿಕ ಸರ್ಕಾರ ಮತ್ತು ಮುಂಬೈನ ಹರೀಶ್–ಬೀನಾ ಶಾ ಫೌಂಡೇಶನ್ ಆರ್ಥಿಕ ಬೆಂಬಲ ಘೋಷಿಸಿ ಸುಮಾರು 30 ಕೋಟಿ ರೂ. ಹಣವನ್ನು ನವಿಕೀರಣಕ್ಕೆ ಬಿಡುಗಡೆ ಮಾಡಿತ್ತು.
ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಅಯೋಧ್ಯೆಯಲ್ಲಿ ಪತ್ರಿಷ್ಠಾಪನೆ: ಈ ವರ್ಷ ಉದ್ಘಾಟನೆಯಾದ ಅಯೋಧ್ಯೆ ರಾಮ ಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಬಾಲ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಿಶೇಷವೆಂದರೆ ಮೂರ್ತಿ ಕತ್ತೆನೆಗೆ ಬಳಸಿದ ಕಲ್ಲು ಕೂಡಾ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ದೊರೆತಿತ್ತು.
ಕಪಿಲಾ ನದಿಯಲ್ಲಿ ಮುಳುಗಿ ಮೂವರು ದುರ್ಮರಣ:ಸ್ನಾನ ಮಾಡಲು ಹೋಗಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಂಜನಗೂಡು ಪಟ್ಟಣದ ಕಪಿಲಾ ನದಿಯ ಹೆಜ್ಜಿಗೆ ಸೇತುವೆ ಬಳಿ ಸಂಭವಿಸಿತ್ತು. ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿಕೊಂಡು, ದಕ್ಷಿಣದ ಕಾಶಿ ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕಾಗಿ ಅವರು ಆಗಮಿಸಿದ್ದಾಗ ಈ ದುರ್ಘಟನೆ ನಡೆದಿತ್ತು.
ಅವೈಜ್ಞಾನಿಕ ಹಂಪ್ಗೆ ಮೂವರು ಯುವಕರು ಬಲಿ: ಮೈಸೂರು ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಮುಖ್ಯ ದ್ವಾರದ ಎರಡು ಬದಿಯಲ್ಲಿ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್ಗೆ ಮೂವರು ಬಲಿಯಾಗಿದ್ದರು. ಘಟನೆ ಬಳಿಕ ಹಂಪ್ ತೆಗೆದುಹಾಕಲಾಗಿತ್ತು.
ಬಂಡೀಪುರ ಉಳಿಸಿ ಅಭಿಯಾನ: ಕೇರಳದ ನೀಲಾಂಬುರ್ ಮತ್ತು ಕರ್ನಾಟಕದ ನಂಜನಗೂಡಿಗೆ ವಯನಾಡಿನ ಮೂಲಕ ರೈಲು ಸಂಪರ್ಕ ಕಲ್ಪಿಸುವ ನೀಲಾಂಬುರ್ - ನಂಜನಗೂಡು ರೈಲ್ವೆ ಯೋಜನೆ ವಿರೋಧಿಸಿ 'ಬಂಡೀಪುರ ಉಳಿಸಿ' ಎಂಬ ಅಭಿಯಾನ ನಡೆಸಲಾಗಿತ್ತು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿಧೇಯಕ ಅಂಗೀಕಾರ: ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸದುದ್ದೇಶದಿಂದ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧಿಯೇಕ 2024ಕ್ಕೆ ಫೆ.21ರಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು.
ಮೈಸೂರು ವಿವಿಯಿಂದ ನಾಲ್ವರಿಗೆ ಗೌರವ ಡಾಕ್ಟರೇಟ್: ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಪ್ರಾಧ್ಯಾಪಕ ಡಾ. ಭಾಷ್ಯಂ ಸ್ವಾಮೀಜಿ ಮತ್ತು ಎಂ.ಆರ್. ಸೀತಾರಾಮ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು. 103ನೇ ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವವಿಖ್ಯಾತ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಅವರಿಗೆ ಗೌರವ ಪದವಿ ನೀಡಿ ಗೌರವಿಸಲು ನಿರ್ಧರಿಸಲಾಗಿತ್ತು. ಆದರೆ ಅವರ ಬಿಡುವಿಲ್ಲದ ಕಾರಣ ಅಂದು ಬರಲಾಗಲಿಲ್ಲ. ಈ ಘಟಿಕೋತ್ಸವದಲ್ಲಿ ಅವರನ್ನೂ ಗೌರವಿಸಲಾಗಿತ್ತು.
ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾಕ್೯ ಲೋಕಾರ್ಪಣೆ: ಕೇಂದ್ರ ಸರ್ಕಾರದ ಭಾರತೀಯ ಕಂಟೇನರ್ ನಿಗಮ(ಸಿಒಎನ್‌ಸಿಒಆರ್)ದಿಂದ ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್’ (ಎಂಎಂಎಲ್‌ಪಿ) ಲೋಕಾರ್ಪಣೆಗೊಂಡಿತ್ತು.
ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಸ್ತಂಗತ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಾಮರಾಜನಗರದ ಮಾಜಿ ಸಂಸದ ಶ್ರೀನಿವಾಸ್ ಪ್ರಸಾದ್ (76) ಅವರು ಏಪ್ರಿಲ್ 28 ರಂದು ಇಹಲೋಕ ತ್ಯಜಿಸಿದ್ದರು.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಗೆಲುವು: ರಾಜ್ಯದ ಗಮನ ಸೆಳೆದಿದ್ದ ಮೈಸೂರು- ಕೊಡಗು ಲೋಕಸಭೆ ಚುನಾವಣೆಯಲ್ಲಿ ಬರೋಬ್ಬರಿ 1,39,262 ಮತಗಳ ಅಂತರದಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಯ ಸಾಧಿಸಿದ್ದರು.
ನಟ ದರ್ಶನ್ ಬಂಧನ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಮೈಸೂರು ನಗರದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದರು.
ಮುಡಾ ಆಧಿಕಾರಿಗಳ ವರ್ಗಾವಣೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆ ಮುಡಾ ಆಯುಕ್ತ ಸೇರಿದಂತೆ ಮೂವರು ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತ್ತು.
ಮೈಸೂರು ನಗರಕ್ಕೆ ಮೊದಲ ಮಹಿಳಾ ಪೊಲೀಸ್ ಆಯುಕ್ತೆ ನೇಮಕ: ಮೈಸೂರು ನಗರದ ಮೊದಲ ಮಹಿಳಾ ಪೊಲೀಸ್ ಆಯುಕ್ತೆಯಾಗಿ ಸೀಮಾ ಲಾಟ್ಕರ್ ಅವರು ನೇಮಕವಾಗಿದ್ದರು.
ಕಾಂಗ್ರೆಸ್ ಜನಾಂದೋಲನ ಸಮಾವೇಶ: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಪ್ರತಿಪಕ್ಷಗಳಾದ ಬಿಜೆಪಿ - ಜೆಡಿಎಸ್ ನಡೆಸಿದ್ದ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರದಿಂದ ಜನಾಂದೋಲನ ಸಮಾವೇಶ ನಡೆಸಿತ್ತು.