ಬೆಂಗಳೂರು:ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಬದಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶವವಾಗಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಕಾರಿನಲ್ಲಿ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ವ್ಯಕ್ತಿಯನ್ನು ಕೃಷ್ಣಯಾದವ್ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು, ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದರು ಎಂದು ಗೊತ್ತಾಗಿದೆ. ಸೋಮವಾರ ರಾತ್ರಿ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದ ಕೃಷ್ಣಯಾದವ್ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹದ ಮೇಲೆ ಗಾಯದ ಕುರುಹುಗಳು ಕಂಡುಬಂದಿದ್ದು ಯಾರೋ ಅಪರಿಚಿತರು ಹತ್ಯೆವೆಸಗಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಶಂಕಿಸಿದ್ದಾರೆ.
ಅಲ್ಲದೇ ಬೇರೆಡೆ ಹತ್ಯೆ ಮಾಡಿ ಕಾರಿನಲ್ಲಿ ಶವವಿಟ್ಟು ಹಂತಕರು ಪರಾರಿಯಾಗಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದಾರೆ. ವೃತ್ತಿ ವೈಷಮ್ಯದಿಂದಲೋ ಆಥವಾ ಬೇರೆ ಕಾರಣಕ್ಕಾಗಿ ವ್ಯಕ್ತಿ ಸಾವನ್ನಪ್ಪಿದನೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಕುಟುಂಬಸ್ಥರಿಂದ ಕೃಷ್ಣಯಾದವ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಶವವಿದ್ದ ಕಾರು ಯಾರದು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಕಾರಿನ ಮೇಲೆ ಕಬ್ಬು ತುಂಬಿದ್ದ ಲಾರಿ ಪಲ್ಟಿ: ಮೂವರು ಸಾವು