ಬೆಂಗಳೂರು:ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಪೈಕಿ ತೆಲುಗು ಚಿತ್ರರಂಗದ ಪೋಷಕ ನಟಿ ಹೇಮಾ ಸೇರಿದಂತೆ 8 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿಯಿಂದ ನೋಟಿಸ್ ನೀಡಿದೆ. ಮೇ 27ರಂದು ಪ್ರಕರಣದ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಸಿಸಿಬಿ ಮೂಲಗಳು ಮಾಹಿತಿ ನೀಡಿವೆ.
ಮೇ 20ರಂದು ರಾತ್ರಿ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಕೆಲವು ಮಾದಕ ಪದಾರ್ಥಗಳು ಆಂಧ್ರಪ್ರದೇಶದ ಶಾಸಕರೊಬ್ಬರ ಪಾಸ್ ಇರುವ ಕಾರು ಕೂಡ ಪತ್ತೆಯಾಗಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಜನರನ್ನ ಪೊಲೀಸರು ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆಗೊಳಪಡಿಸಿದ್ದರು. ಅಲ್ಲದೆ ಪಾರ್ಟಿ ಆಯೋಜಿಸಿದ್ದ ಆರೋಪದಡಿ ವಾಸು, ವೈ.ಎಂ. ಅರುಣ್ ಕುಮಾರ್, ನಾಗಬಾಬು, ರಣಧೀರ್ ಬಾಬು, ಮೊಹಮ್ಮದ್ ಅಬೂಬಕ್ಕರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು.