ಕಾರವಾರ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
2022ರಲ್ಲಿ ಅಂಕೋಲಾ ತಾಲೂಕಿನ 29 ವರ್ಷದ ವಿವಾಹಿತ ವ್ಯಕ್ತಿ 17 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ತನ್ನ ತಾಯಿ ಕರೆದಿರುವುದಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದ ಎಂದು ಆರೋಪಿಸಿ ಬಾಲಕಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಂದಿನ ಪೊಲೀಸ್ ನಿರೀಕ್ಷಕ ಸಂತೋಷ್ ಶೆಟ್ಟಿ ಅವರು ಆರೋಪಿಯನ್ನು ಬಂಧಿಸಿ, ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಬಳಿಕ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.