ರಾಮನಗರ:ಗಂಡ ಹೆಂಡತಿ ಜಗಳದಲ್ಲಿ ಮಗು ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಗೋದೂರು ಗ್ರಾಮದಲ್ಲಿ ಜರುಗಿದೆ. ಗಂಡ ಹೆಂಡತಿ ಇಬ್ಬರ ಜಗಳದ ಹಿನ್ನೆಲೆ ವಿಷ ಕುಡಿದ ಮಹಿಳೆ ತನ್ನ ಮಗುವಿಗೂ ವಿಷ ನೀಡಿದ್ದಾರೆ. ಆದರೆ, ಈ ವೇಳೆ 3 ವರ್ಷದ ಮಗು ದೀಕ್ಷಿತ್ ಗೌಡ ಮೃತಪಟ್ಟಿದೆ. ಮತ್ತೊಂದು ಕಡೆ ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಹಾರೋಹಳ್ಳಿ ಹೋಬಳಿಯ ಗೋದೂರು ಗ್ರಾಮದ ಸೋಮಕುಮಾರ್ ಮತ್ತು ಪೂರ್ಣಿಮಾ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯತ್ತಿತ್ತು. ಇಂದು ಇಬ್ಬರ ನಡುವೆ ಮತ್ತೆ ಜಗಳ ಶುರುವಾಗಿದೆ, ಇದು ವಿಕೋಪಕ್ಕೆ ತಿರುಗಿದ ಪರಿಣಾಮ ಪೂರ್ಣಿಮಾ ವಿಷ ಕುಡಿದು ತನ್ನ ಮಗು ದೀಕ್ಷಿತ್ ಗೌಡನಿಗೂ ಕುಡಿಸಿದ್ದಾಳೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಇದನ್ನು ಗಮನಿಸಿದ ಮನೆಯವರು ತಕ್ಷಣ ಇವರಿಬ್ಬರನ್ನು ಹಾರೋಹಳ್ಳಿ ಬಳಿಯ ದಯಾನಂದ್ ಸಾಗರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.