ತುಮಕೂರು: ಬೆಂಗಳೂರಿನ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು ತುಮಕೂರು ನಗರದಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಬೆಂಗಳೂರು ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ಟೀಂ ನಗರದ ಪ್ರಮುಖ ಸಿಸಿಟಿವಿಗಳ ಪರಿಶೀಲನೆಯಲ್ಲಿ ತೊಡಗಿವೆ.
ಬುಧವಾರ ರಾತ್ರಿ ದಿಢೀರ್ ಬೆಂಗಳೂರು ಪೊಲೀಸರ ತಂಡ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರ ಅವರ ಜೊತೆ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್ ಸಿಟಿಯ ಸಿಸಿಟಿವಿ ಕಂಟ್ರೋಲ್ ರೂಮ್ ಗೆ ತೆರಳಿ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದೆ. ಈ ನಡುವೆ ತುಮಕೂರು ನಗರದ ಹಾಗೂ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿರುವ ಸಿಸಿಟಿವಿಗಳ ವಿಡಿಯೋಗಳನ್ನು ಪಡೆದುಕೊಂಡಿದೆ. ಅಲ್ಲದೆ ತಡ ರಾತ್ರಿಯವರೆಗೂ ಪೊಲೀಸರ ತಂಡ ಸುದೀರ್ಘ ಪರಿಶೀಲನೆ ನಡೆಸಿತು ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣ ಹಿನ್ನೆಲೆ:ಮಾರ್ಚ್ 1 ರಂದು ಮಧ್ಯಾಹ್ನದ ಒಂದು ಗಂಟೆ ಸಮಯಕ್ಕೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ದಿಢೀರನೇ ಭಾರಿ ಶಬ್ಧವೊಂದು ಕೇಳಿಬಂದಿತ್ತು. ಜನರಿಂದ ತುಂಬಿದ್ದ ಕೆಫೆಯಲ್ಲಿ ಇದ್ದಕ್ಕಿದ್ದಂತೆ ಈ ಸದ್ದು ಇಡೀ ನಗರ, ರಾಜ್ಯ ಅಷ್ಟೇ ಅಲ್ಲದೆ ದೇಶಾದ್ಯಂತ ಸುದ್ದಿಯಾಯಿತು. ಅಲ್ಲಿಗೆ ಆಗಮಿಸಿದ್ದ ಆಗುಂತಕನೊಬ್ಬ ಬ್ಯಾಗ್ನೊಂದಿಗೆ ಬಂದಿದ್ದ. ಇಡ್ಲಿ ತಿಂದ ಬಳಿಕ ಬ್ಯಾಗನ್ನು ಅಲ್ಲೇ ಬಿಟ್ಟು ತೆರಳಿದ್ದ. ಕೆಲವೇ ಕ್ಷಣಗಳಲ್ಲಿ ಅದರಲ್ಲಿದ್ದ ಬಾಂಬ್ ಸ್ಫೋಟಗೊಂಡಿತ್ತು. ಇದರಿಂದ 9 ಜನರು ಗಾಯಗೊಂಡಿದ್ದರು.