ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ತನಿಖೆ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರಿನ ಎನ್ಐಎ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ತಮಿಳುನಾಡು ಹಾಗೂ ಕೇರಳದ ಎನ್ಐಎ ವಿಭಾಗದ ಅಧಿಕಾರಿಗಳು ಕೊಯಮತ್ತೂರಿನ ಕಾರ್ ಬಾಂಬ್ ಸ್ಫೋಟ ಪ್ರಕರಣದ ನಾಲ್ವರು ಹಾಗೂ ಕೇರಳದ ಪಾಲಕ್ಕಾಡ್ನಲ್ಲಿ ನಡೆದ ಆರ್ಎಸ್ಎಸ್ ಮುಖಂಡನ ಹತ್ಯೆ ಪ್ರಕರಣದ ಓರ್ವ ಆರೋಪಿ ಸೇರಿದಂತೆ ಐವರನ್ನು ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಾರ್ಚ್ 1ರಂದು ಬ್ರೂಕ್ ಫೀಲ್ಡ್ನ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಗೆ ಐವರು ಆರೋಪಿಗಳೊಂದಿಗೆ ನಂಟು ಇರುವ ಗುಮಾನಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಎನ್ಐಎ ಅಧಿಕಾರಿಗಳು ಕೇರಳ ಹಾಗೂ ತಮಿಳುನಾಡಿನ ಎನ್ಐಎ ಅಧಿಕಾರಿಗಳಿಗೆ ನೀಡಿದ ಮಾಹಿತಿ ಮೇರೆಗೆ ನ್ಯಾಯಾಂಗ ಬಂಧನದಲ್ಲಿರುವ ಐವರು ಆರೋಪಿಗಳನ್ನು ಮಾರ್ಚ್ 18ರಿಂದ 28ರ ವರೆಗೆ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆ ಜೊತೆ ನಂಟು ಹಾಗೂ 2022ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಜಮೀಲ್ ಪಾಷಾ ಉಮ್ರಿ, ಮೊಹಮ್ಮದ್ ಹುಸೇನ್, ಇರ್ಷತ್, ಸೈಯದ್ ಅಬ್ದುಲ್ ರೆಹಮಾನ್ ಹಾಗೂ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದ್ದ ಆರ್ಎಸ್ಎಸ್ ಮುಖಂಡ ಶ್ರೀನಿವಾಸ್ ಹತ್ಯೆ ಪ್ರಕರಣದ ಆರೋಪಿ ಶಫಿಕ್ ಸೇರಿ ಐವರನ್ನು ವಶಕ್ಕೆ ಪಡೆದು ಆಯಾ ವಿಭಾಗದ ಎನ್ಐಎ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.