ಬೆಳಗಾವಿ: ಚುನಾವಣೆ ಪೂರ್ವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನ ದರ್ಪ ನೋಡಿ ಜನರು ಬೇಸತ್ತು ಹೋಗಿದ್ದರು. ಅವರಿಗೆ ತಕ್ಕ ಉತ್ತರವನ್ನು ಮತದಾರರು ನೀಡಿದ್ದಾರೆ. ಇನ್ನಾದರೂ ಸುಧಾರಿಸಿಕೊಳ್ಳಲಿಲ್ಲ ಎಂದರೆ, ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟ ಎದುರಾಗಬಹುದು. ಅವರು ಸುಧಾರಣೆ ಆಗಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಚ್ಚರಿಸಿದರು.
ಬುಧವಾರದಂದು ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವರಿದ್ದಾರೆ, ಅವರ ಆಟದೆದುರು ಮನುಷ್ಯನ ಆಟ ನಡೆಯುವುದಿಲ್ಲ. ಕಳೆದ ಮೂರು ತಿಂಗಳಿನಿಂದ ಚುನಾವಣೆ ಸಂದರ್ಭ ಅವರ ಮಾತಿನ ದರ್ಪ ನಡೆಯುತಿತ್ತು. ಜನರು ಎಲ್ಲವನ್ನೂ ನೋಡಿ ಅವರಿಗೆ ಬುದ್ಧಿ ಕಲಿಸಿದ್ದಾರೆ. ನಮ್ಮ ತಂದೆ 60 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ನಾವು ಒಂದು ಗಾಡಿ ತೆಗೆದುಕೊಳ್ಳಲು ಯೋಚಿಸುತ್ತೇವೆ. ಆದರೆ ಹೆಬ್ಬಾಳ್ಕರ್ ಕುಟುಂಬ ಹಣ ಎಲ್ಲಿಂದ ತರುತ್ತದೆ ಎಂಬುದು ಜನರಿಗೆ ಈಗಾಗಲೇ ಗೊತ್ತಾಗಿದೆ. ಮತದಾರರು ಬುದ್ಧಿವಂತರಾಗಿದ್ದಾರೆ. ಅವರನ್ನು ಜನರು ತಿರಸ್ಕಾರ ಮಾಡಿದ್ದಾರೆ. ಅವರು ಸುಧಾರಣೆ ಆಗ್ಲಿಲ್ಲ ಎಂದರೆ ಇನ್ನೂ ಕೆಟ್ಟ ಪರಿಸ್ಥಿತಿ ಬರುತ್ತದೆ ಎಂದು ತಿಳಿಸಿದರು.
ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರತದ ಕೀರ್ತಿ ಹೆಚ್ಚಲಿದೆ. ಮೋದಿ ಅವರು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂಬುದು ಊಹಾಪೋಹಗಳಷ್ಟೇ. ಕಾಂಗ್ರೆಸ್ಗೆ 60 ಸೀಟು ಬರಬೇಕಿತ್ತು. ಆದರೆ 30 ಜಾಸ್ತಿ ಆಗುತ್ತಿದ್ದಂತೆ ಭ್ರಮೆಗೆ ಹೋಗಿದ್ದಾರೆ. ಜಗತ್ತು ಗೆದ್ದಂತೆ ಭಾವಿಸಿದ್ದಾರೆ. ಆದರೆ, ಇನ್ನೂ 20 ವರ್ಷ ಬಿಜೆಪಿಯೇ ಕೇಂದ್ರದಲ್ಲಿ ಆಡಳಿತ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.