ಬೆಂಗಳೂರು: ಸರ್ಕಾರ ವಾರ್ಷಿಕ 2,000 ಕೋಟಿ ರೂ. ಅನುದಾನ ನೀಡಿದರೆ ರಸ್ತೆ ಸಾರಿಗೆ ನಿಗಮಗಳ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ವಾರ್ಷಿಕ ರಸ್ತೆ ಸಾರಿಗೆ ನಿಗಮಗಳಿಗೆ 2,000 ಕೋಟಿ ಅನುದಾನ ನೀಡಿದರೆ ಪರಿಸ್ಥಿತಿ ಸುಧಾರಣೆ ಆಗಲಿದೆ. ಈಗ ವಾರ್ಷಿಕ 500-300 ಕೋಟಿ ರೂ. ವರೆಗೆ ಅನುದಾನ ನೀಡಲಾಗುತ್ತಿದೆ. ರಸ್ತೆ ಸಾರಿಗೆ ನಿಗಮಗಳ ಸುಧಾರಣೆ ಕ್ರಮಗಳ ಬಗ್ಗೆ ಆಯೋಗ ವರದಿ ನೀಡಿದೆ. ಇದರಲ್ಲಿ ಕೆಲವು ಪೂರಕವಾಗಿದ್ದರೆ, ಇನ್ನೂ ಕೆಲವು ಅನುಷ್ಠಾನ ಕಷ್ಟಸಾಧ್ಯ. ಹೀಗಾಗಿ ಎರಡು ಸಾವಿರ ಕೋಟಿ ರೂ. ವಾರ್ಷಿಕ ಅನುದಾನ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ. ಈ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ನಿಗಮಗಳ ಪರಿಸ್ಥಿತಿ ಸುಧಾರಣೆ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ (ETV Bharat) ನಾಲ್ಕು ರಸ್ತೆ ಸಾರಿಗೆ ನಿಗಮಗಳದವರು ಆರೇಳು ತಿಂಗಳಿಂದ ದರ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ಬಿಎಂಟಿಸಿಯಲ್ಲಿ 2014ರಲ್ಲಿ ದರ ಏರಿಕೆ ಮಾಡಲಾಗಿತ್ತು. ಆಗಿನಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. 2020ರಲ್ಲಿ ಬಿಎಂಟಿಸಿ ಹೊರತುಪಡಿಸಿ ಇತರ ರಸ್ತೆ ಸಾರಿಗೆ ನಿಗಮಗಳು ಶೇ.12 ದರ ಹೆಚ್ಚಳ ಮಾಡಿತ್ತು. ಆಗ ಡೀಸೆಲ್ ಬೆಲೆ ನಿತ್ಯ ₹ 9.16 ಕೋಟಿ ಖರ್ಚು ಆಗುತ್ತಿತ್ತು. ಈಗ ನಿತ್ಯ ₹ 13.21 ಕೋಟಿ ಖರ್ಚಾಗುತ್ತಿದೆ. 2020ರಲ್ಲಿ ದಿನಕ್ಕೆ 12.85 ಕೋಟಿ ಖರ್ಚಾಗಿತ್ತು. ಈಗ ದಿನಕ್ಕೆ 18.36 ಕೋಟಿ ಖರ್ಚಾಗುತ್ತಿದೆ. ಬಿಜೆಪಿಯವರೇ ಇದ್ದಾಗ ಸುಮಾರು 5,900 ಕೋಟಿ ರೂ. ಸಾಲ ಇತ್ತು ಎಂದರು.
2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ 8.02% ಹೆಚ್ಚಿಸಲಾಗಿದೆ. ಆರ್. ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಒಟ್ಟು 7 ಬಾರಿ ಒಟ್ಟು 47.8% ರಷ್ಟು ಪ್ರಯಾಣ ದರವನ್ನು ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ಅವಧಿ 2013-2015ರಲ್ಲಿ 18.46% ದಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ನಾನು ಸಾರಿಗೆ ಸಚಿವನಾಗಿದ್ದಾಗ 2% ದರ ಕಡಿಮೆ ಮಾಡಿದ್ದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ 2020ರಲ್ಲಿ 12% ಎಷ್ಟು ದರ ಹೆಚ್ಚಳ ಮಾಡಲಾಗಿತ್ತು ಎಂದು ಅಂಕಿಅಂಶ ನೀಡಿದರು.
8,800 ಕೋಟಿ ರೂ. ಈವರೆಗೆ ಶಕ್ತಿ ಯೋಜನೆಗಾಗಿ ಬಿಡುಗಡೆ ಮಾಡಲಾಗಿದೆ. 1,700 ಕೋಟಿ ರೂ. ಶಕ್ತಿ ಯೋಜನೆಗೆ ಪಾವತಿ ಬಾಕಿ ಇದೆ. ಬಿಜೆಪಿಯವರು ಮಹಿಳಾ ವಿರೋಧಿಗಳಾಗಿದ್ದಾರೆ. ಅವರು ಇದ್ದಾಗ ಎರಡು ತಿಂಗಳು ತಡವಾಗಿ ವೇತನ ಕೊಡುತ್ತಿದ್ದರು. ಈಗ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಬಂದ ಬಳಿಕ ಒಟ್ಟು 10,000 ಸಿಬ್ಬಂದಿಯನ್ನು ನೇಮಕಾತಿ ಮಾಡಲಾಗುತ್ತಿದೆ. ಈಗ ಎರಡು ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ಒಪ್ಪಿಗೆ ನೀಡಲಾಗಿದೆ. ಸರ್ಕಾರನೇ ಆ ಸಾಲದ ಬಡ್ಡಿ ಹಾಗೂ ಅಸಲು ಪಾವತಿ ಮಾಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ದರ ಪರಿಷ್ಕರಣೆಯಿಂದ ವಾರ್ಷಿಕ ಸುಮಾರು 1200 ಕೋಟಿ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ಎಸ್ ಟಿಯುಗಳನ್ನು ಯಾರೂ ಯಾವ ಲಾಭದ ದೃಷ್ಟಿಯಿಂದ ಮಾಡುವುದಿಲ್ಲ. 70% ಬಸ್ ಗಳಿಂದ ಯಾವುದೇ ಲಾಭ ಇಲ್ಲ ಎಂದು ತಿಳಿಸಿದರು. ಶಕ್ತಿ ಯೋಜನೆ ಜಾರಿಯಾದ ಬಳಿಕ 4340 ಹೊಸ ಬಸ್ ಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ: ಸಚಿವ ರಾಮಲಿಂಗಾರೆಡ್ಡಿ - RAMALINGA REDDY