ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯದಿಂದಾಗಿ ತನ್ನ ಗಂಡ ಸಾವನ್ನಪ್ಪಿರುವುದಾಗಿ ಪತ್ನಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಗರದಲ್ಲಿ ವಾಸವಾಗಿರುವ ರೋಹಿಣಿ ಜಯನ್ ಎಂಬುವರು ನೀಡಿದ ದೂರಿನ ಮೇರೆಗೆ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 106 ನಿರ್ಲಕ್ಷ್ಯದಿಂದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ದೃಶ್ಯ (ETV Bharat) ಗುರುವಾರ ಆಸ್ಪತ್ರೆಯ ಬ್ಲಾಕ್ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಧಗ - ಧಗನೇ ಹೊತ್ತಿ ಉರಿದಿತ್ತು. ಆಸ್ಪತ್ರೆಯ ಪರಿಕರಗಳು ಸಂಪೂರ್ಣ ಹಾನಿಯಾಗಿ ರೋಗಿಗಳನ್ನು ಕೂಡಲೇ ಸ್ಥಳಾಂತರಿಸಲಾಗಿತ್ತು. ಮಾಹಿತಿ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದರು. ಆದರೆ, ನಿನ್ನೆ ನಡೆದ ಅಗ್ನಿ ಅವಘಡದಲ್ಲಿ ಆಸ್ಪತ್ರೆಯ ತೀವ್ರ ನಿರ್ಲಕ್ಷ್ಯದಿಂದಾಗಿ ಗುಣಮುಖರಾಗುತ್ತಿದ್ದ ತನ್ನ ಗಂಡ ಫಣೀಕರ್ ಸುಜಯ್ ಸಾವನ್ನಪ್ಪಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ನ್ಯೂಮೋನಿಯಾ ಹಾಗೂ ಎಚ್1 ಎನ್1 ಚಿಕಿತ್ಸೆಗಾಗಿ ಸೆ.1ರಂದು ರಾಮಯ್ಯ ಆಸ್ಪತ್ರೆಗೆ ಪತಿಯನ್ನು ಸೇರಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾಗುತ್ತಿದ್ದಂತೆ ಹೃದ್ರೋಗ ತಪಾಸಣಾ ಘಟಕ (ಸಿಸಿಯು)ಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೇ ಘಟಕದಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದಾಗ ಆಸ್ಪತ್ರೆಯು ಆಡಳಿತ ಮಂಡಳಿ ಪ್ರತಿಕ್ರಿಯಿಸಿರಲಿಲ್ಲ. ಈ ಬಗ್ಗೆ ಒತ್ತಾಯಿಸಿದಾಗ ನಿನ್ನೆ ಸಂಜೆ 4.30ಕ್ಕೆ ಸಿಸಿಯು ಘಟಕಕ್ಕೆ ಒಳಬಿಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಪತಿಯನ್ನು ನೋಡಿದಾಗ ಮೃತರಾಗಿರುವುದು ಕಂಡುಬಂದಿದೆ. ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ತನ್ನ ಪತಿ ಸಾವನ್ನಪ್ಪಿರುವುದಾಗಿ ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ನಾಯಿ ಛೂ ಬಿಟ್ಟ ಪ್ರಕರಣ: ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ತಡೆ - Property Dispute Case